November 21, 2026
;
kaadu1

 

 

ಬೇಲೂರು ಭಾಗದಿಂದ ಸಕಲೇಶಪುರ ಭಾಗಕ್ಕೆ ಬಂದಿದ್ದ ಎರಡು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯು ಗುರುವಾರ (ನವೆಂಬರ್ 19) ಅಂತಿಮವಾಗಿ ಯಶಸ್ಸು ಕಂಡಿದೆ.

ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದ ಕಾಫಿ ತೋಟದ ಬಳಿ ಎರಡು ಕಾಡಾನೆಗಳನ್ನು ಅರಣ್ಯ ಇಲಾಖೆ   ಸಿಬ್ಬಂದಿ ಡ್ರೋನ್‌ ಬಳಸಿ ಪತ್ತೆ ಮಾಡಿದ್ದರು. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಕಾಡಾನೆಗಳನ್ನು ಜೊತೆಯಾಗಿಯೇ ಓಡ ತೊಡಗಿದ್ದವು. ಈ ವೇಳೆ ಒಂದು ಸಲಗಕ್ಕೆ ಅರವಳಿಕೆ ಮದ್ದನ್ನು ನೀಡಲಾಯಿತು. ಆದರೂ ಅದು ನಿತ್ರಾಣಗೊಳ್ಳದೇ ಸಾಕಷ್ಟು ದೂರ ಓಡಿ ಹೋಗಿತ್ತು.

ಅರವಳಿಕೆ ನೀಡಿ ಒಂದು ಗಂಟೆ ಕಳೆದರೂ ಆನೆ ನಿತ್ರಾಣಗೊಳ್ಳದ ಕಾರಣ ಮತ್ತೊಂದು ಡಾಟ್‌ ನೀಡಲಾಯಿತು. ಈ ವೇಳೆ ಕಾಫಿ ತೋಟವೊಂದರಲ್ಲಿ ಓಡಿಹೋಗಿ ಆನೆ ನಿತ್ರಾಣಗೊಂಡು ನಿಂತುಕೊಂಡಿದೆ. ಈ ವೇಳೆ ಕುಮ್ಕಿ ಆನೆಗಳು ಅರವಳಿಕೆ ನೀಡಲಾಗಿದ್ದ ಕಾಡಾನೆಯನ್ನು ಸುತ್ತುವರೆಯಲು ಬಂದಾಗ ಜೊತೆಯಲ್ಲಿದ್ದ ಮತ್ತೊಂದು ಸಣ್ಣ ಸಲಗ ಘೀಳಿಡುತ್ತಾ ಬಂದಿದೆ. ಈ ವೇಳೆ ಆ   ಸಲಗಕ್ಕೂ ಅರಣ್ಯ ಸಿಬ್ಬಂದಿ ಅರವಳಿಕೆ ನೀಡಿದ್ದಾರೆ. ಇದರಿಂದ ಸಣ್ಣ ಸಲಗ ಓಡಿಹೋಗಿ, ಸ್ವಲ್ಪ ದೂರ ತೆರಳಿ ನಿತ್ರಾಣಗೊಂಡು ನಿಂತುಕೊಂಡಿತ್ತು. ಬಳಿಕ ಎರಡೂ ಆನೆಗಳನ್ನು ಕುಮ್ಕಿ ಆನೆಗಳು ಸುತ್ತುವರೆದವು. ಬಳಿಕ ಹಗ್ಗ ಕಟ್ಟಿ, ಅವುಗಳನ್ನು ರಸ್ತೆಗೆ ತರಲಾಯಿತು.

ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಶ್ರೀಕಂಠ, ಅಶೋಕ, ರೋಹಿತ್, ಮಾಣಿಕ್ಯ, ಅಯ್ಯಪ್ಪ, ಏಕಲವ್ಯ ಕುಮ್ಕಿ ಆನೆಗಳು ಭಾಗಿಯಾಗಿವೆ.

 

 

Leave a Reply

Your email address will not be published. Required fields are marked *