November 21, 2026
;
1004325889

 

 

ಚಿಕ್ಕಮಗಳೂರಿನ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಉಪ ನಿರ್ದೇಶಕರ ಕಚೇರಿ, ಬೆಂಗಳೂರಿನ ಐಐಎಚ್‌ಆರ್ (IIHR) ಸಹಯೋಗದೊಂದಿಗೆ, 19.11.2026 ರಂದು ಮೂಡಿಗೆರೆಯ ಹಿರಿಯ ಸಂಪರ್ಕಾಧಿಕಾರಿಗಳ ಕಚೇರಿ ವತಿಯಿಂದ ಮೂಡಿಗೆರೆ ಬೆಳೆಗಾರರ ಸಂಘದ ಸಭಾ ಭವನದಲ್ಲಿ  “ಮಣ್ಣಿನ ಆರೋಗ್ಯ, ಸುಸ್ಥಿರ ಕಾಫಿ ಕೃಷಿ ಮತ್ತು ಖೇತ್ ಬಚಾವೋ ಅಭಿಯಾನ” ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಚಿಕ್ಕಮಗಳೂರು ಜಿಲ್ಲಾ ವಿಸ್ತರಣಾ ವಿಭಾಗದ ಉಪ ನಿರ್ದೇಶಕರಾದ ಡಾ. ಕೆ. ತಂಗರಾಜ ಅವರು ಸ್ವಾಗತ ಭಾಷಣ ಮಾಡಿದರು. ಹಾಸನದ ವಿಸ್ತರಣಾ ವಿಭಾಗದ ಜಂಟಿ ನಿರ್ದೇಶಕರಾದ  ಎನ್. ನಂದಗೋಪಾಲ್ ಅವರು ಇತರ ಗಣ್ಯರೊಂದಿಗೆ ಸೇರಿ ಈ ವಿಚಾರ ಸಂಕಿರಣವನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಿಷ್ಯದ ಪೀಳಿಗೆಗಾಗಿ ಮಣ್ಣಿನ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು.

ಮೂಡಿಗೆರೆ ಕಾಫಿ ಬೆಳೆಗಾರರ ​​ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅವರು, ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸಲು ಸ್ಥಳೀಯ ಅರಣ್ಯ ಪ್ರಭೇದಗಳನ್ನು ಬೆಳೆಸುವಂತೆ ಮತ್ತು ಸಿಲ್ವರ್ ಓಕ್ (ಬೆಳ್ಳಿ ಓಕ್) ಮರಗಳ ನೆಡುವಿಕೆಯನ್ನು ಕಡಿಮೆ ಮಾಡುವಂತೆ, ಕಾಫಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ರೈತರಿಗೆ ಸಾಕಷ್ಟು ಅನುಕೂಲಕರವಾದ ಕಾರ್ಯಕ್ರಮಗಳು, ಯೋಜನೆಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು  ಕರೆ ನೀಡಿದರು.

ತಾಂತ್ರಿಕ ಅಧಿವೇಶನಗಳಲ್ಲಿ,  ಎ. ನಾಗರಾಜ (ಐಐಎಚ್‌ಆರ್) ಅವರು ಮತ್ತು ಚಿಕ್ಕಮಗಳೂರು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ  ಶ್ರೀಮತಿ ಅಕ್ಷಿತಾ ಅವರು ಮಣ್ಣಿನ ಆರೋಗ್ಯ ನಿರ್ವಹಣೆಯ ಬಗ್ಗೆ, ವಿಜ್ಞಾನಿ ಡಾ. ಸೋಮಶೇಖರ್ ಪಾಟೀಲ್ ಅವರು ಹವಾಮಾನ ಬದಲಾವಣೆ ಮತ್ತು ಮಣ್ಣಿನ ಆರೋಗ್ಯದ ಬಗ್ಗೆ, ಹಾಗೂ  ಸಂದೀಪ (ಎಸ್‌ಎಂಎಸ್) ಅವರು ವಿಶೇಷ ಕಾಫಿ (ಸ್ಪೆಷಾಲಿಟಿ ಕಾಫಿ), ಮೌಲ್ಯವರ್ಧನೆ ಮತ್ತು ಸಿಸಿಆರ್‌ಐ (CCRI) ಕೈಗೊಂಡಿರುವ ತಾಂತ್ರಿಕ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು.

‘ನಿಮ್ಮ ಮಣ್ಣನ್ನು ತಿಳಿಯಿರಿ’ (Know Your Soil) ಅಭಿಯಾನದ ಭಾಗವಾಗಿ, ಸಿಸಿಆರ್‌ಐನ ಮಣ್ಣು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಜೀಬ್ ಪಾಟಿ ಅವರು ಸ್ಥಳದಲ್ಲೇ ಮಣ್ಣಿನ ಪರೀಕ್ಷೆಯನ್ನು ನಡೆಸಿದರು. ಒಟ್ಟು 50 ಮಣ್ಣಿನ ಮಾದರಿಗಳನ್ನು ವಿಶ್ಲೇಷಿಸಲಾಯಿತು ಮತ್ತು ಬೆಳೆಗಾರರಿಗೆ ಮಣ್ಣಿನ ಪಿಎಚ್ (pH) ಮೌಲ್ಯಗಳು ಹಾಗೂ ಸುಣ್ಣದ ಬಳಕೆಯ ಕುರಿತು ಶಿಫಾರಸುಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವರುಂದ, ಮೂಡಿಗೆರೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಉಪಸ್ಥಿತರಿದ್ದರು.

ಮಾಹಿತಿ ಕಾರ್ಯಾಗಾರದಲ್ಲಿ ನೂರಕ್ಕೂ ಹೆಚ್ಚು ಬೆಳೆಗಾರರು, ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಎಲ್ಲಾ ಭಾಗವಹಿಸಿದವರಿಗೂ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.

ಮೂಡಿಗೆರೆ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿಗಳಾದ ಶ್ರೀಮತಿ ಕೆ.ಟಿ. ತಾರಾ ಅವರು ವಂದಿಸಿದರು.

 

 

 

Leave a Reply

Your email address will not be published. Required fields are marked *