ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲ್ಲೂಕು ಮತ್ತು ಬೇಲೂರು ತಾಲ್ಲೂಕಿನಲ್ಲಿ ಮೂವರು ಕೃಷಿಕರು ಕಾಡಾನೆ ದಾಳಿಗೆ ಬಲಿಯಾಗಿರುವುದಕ್ಕೆ ಚಿಕ್ಕಮಗಳೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್ ಅಶೋಕ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ; ಕಾಡಾನೆ ದಾಳಿಯಿಂದ ಮಲೆನಾಡು ಭಾಗದಲ್ಲಿ ನಿರಂತರ ಜೀವ ಹಾನಿ ಸಂಭವಿಸುತ್ತಿವೆ. ಕಳೆದ ಹಲವು ವರ್ಷಗಳಿಂದ ಹತ್ತಾರು ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ನಿರಂತರವಾದ ಕಾಡಾನೆ ಹಾವಳಿಯಿಂದ ಬಹಳಷ್ಟು ಬೆಳೆ ನಷ್ಟವಾಗುತ್ತಿದೆ. ಕೃಷಿಕರು, ಕಾರ್ಮಿಕರು, ಜನಸಾಮಾನ್ಯರು ಜೀವಭಯದಲ್ಲಿ ಬದುಕುವಂತಹ ಸನ್ನವೇಶ ಸೃಷ್ಟಿಯಾಗಿದೆ.
ಕಾಡಾನೆ ಹಾವಳಿ ತಡೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ವಹಿಸಬೇಕು. ಕಾಡುಬಿಟ್ಟು ನಾಡಿನತ್ತ ಲಗ್ಗೆ ಇಟ್ಟಿರುವ ಎಲ್ಲಾ ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು. ಬೇಲೂರು ಭಾಗದಲ್ಲಿ ಇರುವ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ಯೋಜನೆ ಬಗ್ಗೆ ಕೃಷಿಕ ಸಮಾಜದ ತೀವ್ರ ಆಕ್ಷೇಪವಿದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಈಗ ಇನ್ನಷ್ಟು ಕಾಡಾನೆಗಳು ಈ ಭಾಗಕ್ಕೆ ಬಂದರೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಎಲ್ಲಾ ಕಾಡಾನೆಗಳನ್ನು ಸೆರೆಹಿಡಿದು ಬೇರೆ ಅಭಯಾರಣ್ಯಗಳಿಗೆ ಬಿಡುವಂತೆ ಅಶೋಕ್ ಕುಮಾರ್ ಒತ್ತಾಯಿಸಿದ್ದಾರೆ.


