November 24, 2026
;
raitha

 

 

ಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿಗೆ ಆಗಮಿಸಿರುವ ಕಾಡಾನೆಗಳನ್ನು ಭದ್ರಾ ಅರಣ್ಯ ಪ್ರದೇಶದತ್ತ ಓಡಿಸುವ ಸರಕಾರ ಹಾಗೂ ಅರಣ್ಯ ಇಲಾಖೆ ಕೈಗೊಂಡಿರುವ ನಿರ್ಧಾರದ  ಬಗ್ಗೆ ಮೊದಲು ವೈಜ್ಞಾನಿಕ ಅಧ್ಯಯನ ನಡೆಸಬೇಕೆಂದು ರೈತ ಸಂಘದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಒತ್ತಾಯಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ತಾಲೂಕಿನಲ್ಲಿ ಈಗಾಗಲೇ 30ಕ್ಕೂ ಅಧಿಕ ಕಾಡಾನೆ ಬೀಡು ಬಿಟ್ಟಿವೆ. ಇದರ ನಡುವೆ ಇದೀಗ ಬೇಲೂರಿನಿಂದ ಸುಮಾರು 36 ಕಾಡಾನೆಗಳು ಸೇರಿಕೊಂಡಿವೆ. ಈಗಾಗಲೇ ಕಾಡಾನೆಗಳ ಹಾವಳಿಯಿಂದ ಕಾಫಿ, ಕಾಳುಮೆಣಸು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿದ್ದು, ತೋಟದ ಬೇಲಿ, ನೀರಾವರಿ ವ್ಯವಸ್ಥೆಗಳೂ ನಾಶವಾಗುತ್ತಿವೆ. ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಬೆಳೆಗಾರರು ಜೀವಭಯದ ನಡುವೆ ಕೃಷಿ ಮಾಡುವಂತಾಗಿದೆ. ಹಾಗಾಗಿ ಕಾಡನೆಗಳು ಬಂದಿದ್ದ ಮೂಲವನ್ನು ಪತ್ತೆ ಹಚ್ಚಿ ಅಲ್ಲಿಗೆ ವಾಪಾಸು ಸ್ಥಳಾಂತರಿಸಬೇಕೆಂದು ಆಗ್ರಹಿಸಿದ ಅವರು, ಜಿಲ್ಲೆಯ ಶಾಸಕರು ರಾಜೀನಾಮೆ ನೀಡುವ ಬಗ್ಗೆ ನಾಟಕವಾಡುತ್ತಿದ್ದಾರೆ. ಈ ಸಮಸ್ಯೆ ಎದುರಾಗುವ ಮುನ್ನವೇ ಎಚ್ಚರ ವಹಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೆಂದು ಹೇಳಿದರು.

ಕಾರ್ಯಾಧ್ಯಕ್ಷ ದಯಾಕರ್ ಮಾತನಾಡಿ, ಕಾಡಾನೆಗಳನ್ನು ಭದ್ರಾ ಅರಣ್ಯದಲ್ಲಿ ಈಗಾಗಲೇ ಇರುವ ಅನೆಗಳ ಸಂಖ್ಯೆ, ಆಹಾರ ಹಾಗೂ ವಾಸಸ್ಥಳದ ಸಾಮರ್ಥ್ಯ ಪರಿಶೀಲಿಸದೆ ಹೆಚ್ಚುವರಿ ಆನೆಗಳನ್ನು ಬಿಡುವುದರಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತದೆ. ಅಲ್ಲದೇ ಬಾಳೆಹೊನ್ನೂರು, ಖಾಂಡ್ಯ ಹಾಗೂ ಎನ್.ಆರ್.ಪುರ ಭಾಗದಲ್ಲಿ ಮಾನವ, ಆನೆ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ. ಅನೆಗಳ ಸ್ಥಳಾಂತರಕ್ಕೂ ಮುನ್ನ ವನ್ಯಜೀವಿ ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸಬೇಕಿತ್ತು. ಸ್ಥಳೀಯ ರೈತರು ಹಾಗೂ ಗ್ರಾಮಸ್ಥರ ಅಭಿಪ್ರಾಯ ಪಡೆಯಬೇಕಿತ್ತು. ಇದಾವುದನ್ನೂ ಮಾಡದೇ ಏಕ ಪಕ್ಷೀಯವಾಗಿ ಕೈ ಗೊಂಡಿರುವ ನಿರ್ಧಾರ ಖಂಡನೀಯ. ಹಾಸನದ ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕಾಡಾನೆಗಳು ಎಲ್ಲಿಂದ ಬಂದಿತೋ ಅಲ್ಲಿಗೆ ಸ್ಥಳಾಂತರಿಸಬೇಕು. ಒಂದು ವೇಳೆ ಕಾಡಾನೆ ದಾಳಿಗೆ ಮಾನವ ಮೃತಪಟ್ಟರೆ 1ಕೋಟಿ ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್‌ ಗೌಡ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ತುಳಸೇಗೌಡ, ಮೂಡಿಗೆರೆ ತಾಲೂಕು ಅಧ್ಯಕ್ಷ ಎಸ್.ಪಿ.ರಾಜು ಮಾತನಾಡಿದರು.

 

 

Leave a Reply

Your email address will not be published. Required fields are marked *