ಬೇಲೂರು ಭಾಗದ ಕಾಡಾನೆಗಳನ್ನು ಮೂಡಿಗೆರೆ ತಾಲ್ಲೂಕಿನ ಕಡೆಗೆ ಬಲವಂತವಾಗಿ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ನಾಳೆ ನವೆಂಬರ್ 25 ಬುಧವಾರದಂದು ಮೂಡಿಗೆರೆ ಬಂದ್ ಗೆ ಕರೆ ನೀಡಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ಸರ್ವ ಪಕ್ಷದ ಮುಖಂಡರು, ಸಂಘಟನೆಯ ಮುಖಂಡರು ಈ ತೀರ್ಮಾನಕ್ಕೆ ಬಂದಿದ್ದಾರೆ. ಮೂಡಿಗೆರೆ ಪಟ್ಟಣ ಸೇರಿದಂತೆ ಸಂಪೂರ್ಣ ತಾಲ್ಲೂಕು ಬಂದ್ ಗೆ ಕರೆ ನೀಡಲಾಗಿದೆ.
ಆನೆ ಕಾರ್ಯಾಚರಣೆ ವಿರೋಧಿಸಿ ಮೂಡಿಗೆರೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪೂರ್ಣ ಬಂದ್ ಕರೆನೀಡಲಾಗಿದ್ದು, ಬಂದ್‌ಗೆ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯರಿಂದ ಬೆಂಬಲ ವ್ಯಕ್ತವಾಗಿದೆ.
ಆನೆ ಕಾರ್ಯಾಚರಣೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ, ಅರಣ್ಯ ಇಲಾಖೆ ಕಾರ್ಯಾಚರಣೆ ವಿರುದ್ಧ ಜನರ ಆಕ್ರೋಶ, ಜನರ ಜೀವ, ಆಸ್ತಿ ರಕ್ಷಣೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ, ಕಾಡಾನೆಗಳ ಹಾವಳಿಗೆ ಶಾಶ್ವತ ಕಡಿವಾಣ ಹಾಕುವಂತೆ ಒತ್ತಾಯ, ಕೇವಲ ಕಾರ್ಯಾಚರಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಶಾಶ್ವತ ಪರಿಹಾರ ಬೇಕು ಹೀಗೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಬಂದ್ ಕರೆ ನೀಡಲಾಗಿದೆ.
ಬಂದ್ ಸಾರ್ವಜನಿಕರು, ವರ್ತಕರು ಸಂಪೂರ್ಣ ಬೆಂಬಲ ನೀಡಬೇಕು ಎಂದು ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.


