ಬೇಲೂರು ಭಾಗದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಗಳನ್ನು ಮೂಡಿಗೆರೆ ತಾಲೂಕು ಮಾರ್ಗವಾಗಿ ಭದ್ರ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನೂರಾರು ರೈತರು ಸಾರ್ವಜನಿಕರು ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು.

ಸಭೆಗೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಖಂಡರು ಸಮಾಲೋಚನೆ ನಡೆಸಿದರು. ಈ ವೇಳೆ ಕೆಲವರು ಮೂಡಿಗೆರೆ ಬಂದ್ಗೆ ಕರೆ ನೀಡಿ ಉಗ್ರ ಪ್ರತಿಭಟನೆ ನಡೆಸಬೇಕೆಂದು ಒತ್ತಾಯಿಸಿದರೆ. ಇನ್ನು ಕೆಲವರು ಸ್ಥಳಕ್ಕೆ ಡಿಸಿಎಫ್ ಆಗಮಿಸಿ ಜನರ ಅಭಿಪ್ರಾಯ ಆಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಡಿಸಿಎಫ್ ಬೋರಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಆಗಮಿಸುವಂತೆ ಮನವಿ ಮಾಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನಲೆಯಲ್ಲಿ ಸಭೆಯನ್ನು ಪಟ್ಟಣದ ಅಡ್ಯಂತಾಯ ರಂಗ ಮಂದಿರಕ್ಕೆ ಸ್ಥಳಾಂತರಿಸಲಾಯಿತು.
ಸಭೆಗೆ ಆಗಮಿಸಿದ ಡಿಸಿಎಫ್ ಬೋರಯ್ಯ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದಾಳಿಗೆ ಕಾರಣವಾದ 2 ಕಾಡಾನೆಯನ್ನು ಸೆರಹಿಡಿಯಲಾಗಿತ್ತು, ಮತ್ತೆ ಮಾನವ ಕಾಡಾನೆ ಸಂಘರ್ಷ ಮರುಕಳಿಸಬಾರದೆಂಬ ಉದ್ದೇಶದಿಂದ ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಸ್ಥಳಾಂತರಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಉಸುವಾರಿ ಸಚಿವರು ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಓಡಿಸುವಂತೆ ಸೂಚಿಸಿದ್ದರು. ಆದರೆ ಈ ಕಾರ್ಯಾಚರಣೆ ಆರಂಭಿಸುವ ಮುನ್ನ ಮೂಡಿಗೆರೆ ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರೈತ ಸಂಘಟನೆಗಳೊಂದಿಗೆ ಸಭೆ ನಡೆಸಲು ಸಾಧ್ಯವಾಗಲಿಲ್ಲವೆಂದು ಹೇಳಿದರು.
ಬೇಲೂರು ಕಡೆಯಿಂದ ಮೂಡಿಗೆರೆ ತಾಲೂಕಿಗೆ ಬಂದಿರುವ ಕಾಡಾನೆಗಳನ್ನು ತತ್ಕೋಳದಿಂದ ಸಾರಗೋಡು. ಕುಂದೂರು, ಬಸವನಕೋಟೆ ಹಾಗೂ ದೇವದಾನದ ಮೂಲಕ ಡ್ರೋನ್ಗಳು ಮತ್ತು ಅರಣ್ಯ ಸಿಬ್ಬಂದಿಯ ಕಾರ್ಯಪಡೆಯ ನೆರವಿನಿಂದ ಯಾವುದೇ ಅವಘಡ ಸಂಭವಿಸದಂತೆ ಭದ್ರ ಅರಣ್ಯಕ್ಕೆ ಓಡಿಸಲು ಯೋಜಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಕಾಡಾನೆಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆಯೋ ಆ ದಿಕ್ಕಿನಲ್ಲೇ ತೆರಳಲು ಬಿಡಲಾಗಿದೆ. ತಾಲೂಕಿನ ಜನರು ಸಹಕಾರ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಓಡಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಇದಕ್ಕೆ ಸಭೆಯಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಾಕೋನಹಳ್ಳಿ ಭಾಗದ ರೈತರು ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಓಡಿಸುವಂತೆ ಒತ್ತಾಯಿಸಿದರೆ, ತತ್ಕೋಳ ಮತ್ತು ಕುಂದೂರು ಭಾಗದ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ, ಕಾಡಾನೆಗಳನ್ನು ಓಡಿಸುವ ಬದಲು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪರ-ವಿರೋಧದ ಅಭಿಪ್ರಾಯಗಳಿಂದ ಸಭೆ ಕೆಲಕಾಲ ಗೊಂದಲದ ವಾತಾವರಣಕ್ಕೆ ತಿರುಗಿತು.
ಇದೇ ವೇಳೆ ಬೆಂಗಳೂರಿನಲ್ಲಿ ಜಿಲ್ಲೆಯ ಶಾಸಕರು ಸಚಿವರೊಂದಿಗೆ ಸಭೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಯಿತು. ಬಳಿಕ ಮಾತನಾಡಿದ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮೂಡಿಗೆರೆಯ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕಪಕ್ಷೀಯವಾಗಿ ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಓಡಿಸುವ ಪ್ರಯತ್ನ ಮುಂದುವರಿಸಿದರೆ, ರಸ್ತೆ ತಡೆ ನಡೆಸುವುದರ ಜತೆಗೆ ಮೂಡಿಗೆರೆ ಬಂದ್ಗೆ ಕರೆ ನೀಡಿ ಸರಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಹೋರಾಟದ ನಿಲುವಿಗೆ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು ಸಮ್ಮತಿ ಸೂಚಿಸಿದರು. ಬಳಿಕ ಸಭೆಯನ್ನು ಮುಕ್ತಾಯಗೊಳಿಸಿ. ಮುಂದಿನ ಬೆಳವಣಿಗೆಗಳನ್ನು ಗಮನಿಸಿ ಹೋರಾಟದ ರೂಪುರೇಷೆ ರೂಪಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣಕುಮಾರ್, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ರೈತ ಮುಖಂಡ ಬಿ.ಸಿ.ದಯಾಕರ್, ಕಾಂಗ್ರೇಸ್ ಮುಖಂಡ ಎಂ.ಪಿ.ಮನು, ಜಿ.ಹೆಚ್.ಹಾಲಪ್ಪಗೌಡ, ಕೆ.ಆರ್.ಸುಂದರೇಶ್, ಎಂ.ಎನ್. ಅಶ್ವಥ್, ರವಿ ಕುನ್ನಹಳ್ಳಿ, ಬಿಜೆಪಿ ನಾಯಕಿ ವಿಭಾ ಸುಶ್ಮಾ, ಪಿ.ಜಿ.ಅನುಕುಮಾರ್, ಚಂದ್ರೇಗೌಡ ಗಬ್ಬಳ್ಳಿ, ವಿಜಯ್ಕುಮಾರ್, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಕಾರ್ಯದರ್ಶಿ ಪ್ರಸಾದ್ ಬಕ್ಕಿ ಸೇರಿದಂತೆ ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಹಲವು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


