November 24, 2026
;
rajiname

 

 

ಕಾಡಾನೆಗಳ ಸ್ಥಳಾಂತರ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಇದೀಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಹಾಸನದಲ್ಲಿ ಕಾಡಾನೆಗಳ ದಾಳಿಗಳ ಬಳಿಕ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಆನೆಗಳ ಸ್ಥಳಾಂತರಕ್ಕೆ ಮುಂದಾಗಿದ್ದ ಸರ್ಕಾರ ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ರಾತ್ರೋರಾತ್ರಿ ಓಡಿಸಿತ್ತು. ಆದರೆ ಇದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈಗಾಗಲೇ ಸ್ಥಳಾಂತರ ಮಾಡಲಾಗಿರುವ ಆನೆಗಳನ್ನು ವಾಪಸ್ ಓಡಿಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ನಯನಾ ಮೋಟಮ್ಮ ಬಹಿರಂಗವಾಗಿಯೇ ಹೇಳಿದ್ದರು. ನನಗೆ ಸರ್ಕಾರ ಮುಖ್ಯ ಅಲ್ಲ, ನನ್ನ ಜನ ಮುಖ್ಯ ಎಂದು ಹೇಳಿದ್ದರು.

ರಾಜೀನಾಮೆ ನೀಡಿರುವ ಬಗ್ಗೆ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸ್ಪೀಕ‌ರ್ ಇರಲಿಲ್ಲ, ಹೀಗಾಗಿ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗೆ ಕೊಟ್ಟಿದ್ದೇನೆ. ನಾವು ಸ್ವೀಕಾರ ಮಾಡಲ್ಲ ಎಂದು ಕಾರ್ಯದರ್ಶಿ ಹೇಳಿದ್ದಾರೆ. ಹೀಗಾಗಿ ನಾಳೆ ಸ್ಪೀಕ‌ರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ. ಆನೆಗಳನ್ನು ನಮ್ಮ ಕ್ಷೇತ್ರಕ್ಕೆ ಬಿಡಲು ನಾವು ಒಪ್ಪಲ್ಲ, ಜನಕ್ಕೆ ಏನಾದ್ರೂ ನಷ್ಟ ಆದ್ರೆ ಯಾರು ಭರಿಸುತ್ತಾರೆ. ಗೌಪ್ಯವಾಗಿ ಕಾರ್ಯಾಚರಣೆ ಮಾಡಲು ಶುರುಮಾಡಿದ್ದಾರೆ. ನನ್ನನ್ನು ಕೂಡ ಕೇಳಿಲ್ಲ. ಆದ್ರೆ ನಾವು ಜನರಿಗೆ ಉತ್ತರಕೊಡಬೇಕಿದೆ ಎಂದಿದ್ದಾರೆ. ಸರ್ಕಾರ ನಮ್ಮ ಮಾತನ್ನು ಕೇಳಲಿಲ್ಲ. ನಮ್ಮ ಮಾತನ್ನು ಕೇಳದೆ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಸರ್ಕಾರ ಸ್ಥಳೀಯ ಶಾಸಕರ ಮಾತನ್ನು ಕೇಳಬೇಕು. ಮಾತು ಕೇಳಲಿಲ್ಲ ಅಂದ್ರೆ ನಾವ್ಯಾಕೆ ಇರಬೇಕು ಎಂದು ಪ್ರಶ್ನಿಸಿದ್ದಾರೆ. ಹಾಸನದ ಜನರ ಜೀವಕ್ಕೆ ಮಾತ್ರ ಬೆಲೆನಾ, ಮೂಡಿಗೆರೆ ಜನರ ಜೀವಕ್ಕೆ ಬೆಲೆ ಇಲ್ವಾ? ಕಾಂಗ್ರೆಸ್‌ ಶಾಸಕರಿಗೆ ಕಾಂಗ್ರೆಸ್‌ ಸರ್ಕಾರ ಬೆಲೆ ಕೊಡಲ್ಲ ಅಂತಾ ಗೊತ್ತಾಗುತ್ತೆ ಅಂತ ನಯನಾ ಮೋಟಮ್ಮ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯ ಮೂವರು ಶಾಸಕರು ವಿರೋಧ ವ್ಯಕ್ತಪಡಿಸಿದ್ದೇವೆ. ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಕಳುಹಿಸುವ ಕಾರ್ಯಾಚರಣೆ ನಡೆದಿದೆ. ಈ ವಿಚಾರವಾಗಿ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅರಣ್ಯ ಇಲಾಖೆ ಮುಂದುವರಿಯುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ. ಈ ವಿಚಾರ ಬೆಳಕಿಗೆ ಬಂದ ತಕ್ಷಣ ಜಿಲ್ಲೆಯ ಶಾಸಕರು ಒಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದೇವೆ. ತರಿಕೆರೆ ಶಾಸಕರು ಕೂಡ ನಮ್ಮೊಂದಿಗೆ ಸೇರಿ ಅರಣ್ಯ ಸಚಿವರಿಗೆ ಪತ್ರ ಬರೆದು, ಯಾವುದೆ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ. ಯಾವುದೆ ಕಾರ್ಯಾಚರಣೆ ಆರಂಭಿಸುವ ಮೊದಲು ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮೊದಲ ಹೆಜ್ಜೆಯಾಗಬೇಕು. ಆನಂತರ ಅವರ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಆಲಿಸಬೇಕು. ಆದರೆ ನಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಕೂಡ ಅವಕಾಶ ನೀಡಲಿಲ್ಲ. ಮೂಡಿಗೆರೆ, ಶೃಂಗೇರಿ ಮತ್ತು ಚಿಕ್ಕಮಗಳೂರು ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗೌಪ್ಯವಾಗಿ ಕಾರ್ಯಾಚರಣೆ ಆರಂಭಿಸಿರುವುದು ಸರಿಯಲ್ಲ. ಶನಿವಾರ ರಾತ್ರಿಯಿಂದ ಮೂಡಿಗೆರೆ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳೀಯ ಶಾಸಕಿ ನಾನು ನನ್ನನ್ನ. ಕೇಳಿಲ್ಲ. ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಅಂತ ಆರೋಪಿಸಿದ್ದಾರೆ. ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಕಳುಹಿಸುವ ಕಾರ್ಯಾಚರಣೆಯಿಂದ ಮೂಡಿಗೆರೆ, ಶೃಂಗೇರಿ ಹಾಗೂ ಚಿಕ್ಕಮಗಳೂರು ಭಾಗದ ಜನಜೀವನ ಅಸ್ತವ್ಯಸ್ತವಾಗುವ ಆತಂಕವಿದೆ. ಈಗಾಗಲೆ ಆನೆ ದಾಳಿಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಮುಂದೆಯೂ ಸಾರ್ವಜನಿಕರಿಗೆ ಹಾನಿಯಾದರೆ ಯಾರು ಹೊಣೆ, ಜನರ ನಷ್ಟವನ್ನು ಯಾರು ಭರಿಸುತ್ತಾರೆ. ಮೂಡಿಗೆರೆ, ಶೃಂಗೇರಿ ಮತ್ತು ಚಿಕ್ಕಮಗಳೂರು ಭಾಗದ ಜನರ ಜೀವಕ್ಕೆ ಸರ್ಕಾರ ಬೆಲೆ ಕೊಟ್ಟಿಲ್ಲ.

ಈ ಕಾರ್ಯಾಚರಣೆಯಿಂದ ನೇರವಾಗಿ ತೊಂದರೆಗೊಳಗಾಗುವ ಕಾಫಿ ಬೆಳೆಗಾರರು, ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನೂ ಕೇಳಿಲ್ಲ. ಸಂಬಂಧಪಟ್ಟ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಬೇಕಿತ್ತು. ಆನೆ ದಾಳಿಯಿಂದ ಸಂಕಷ್ಟ ಅನುಭವಿಸುತ್ತಿರುವವರು ಶ್ರೀಮಂತರಲ್ಲ, ಬಡ ಕಾರ್ಮಿಕರು. ಕಾರ್ಮಿಕ ವರ್ಗದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರ ಬದುಕಿನ ಬಗ್ಗೆ ಸರ್ಕಾರಕ್ಕೆ ಕಾಳಜಿ ಬೇಡವೇ? ಎಂದು ನಯನಾ ಮೋಟಮ್ಮ ಪ್ರಶ್ನಿಸಿದ್ದಾರೆ.

 

 

Leave a Reply

Your email address will not be published. Required fields are marked *