ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಭೂತನಕಾಡು ಕಲ್ಲುಬಂಡೆ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಸಮರ್ಪಕವಾಗಿ ಬಗೆಹರಿಯದ ಕಾರಣದಿಂದಾಗಿ ಗ್ರಾಮದ ಗೃಹಿಣಿಯರು ಪಂಚಾಯಿತಿ ಕಾರ್ಯಾಲಯದ ಮುಂಭಾಗಕ್ಕೆ ಖಾಲಿ ಕೊಡಗಳೊಂದಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ವಯೋವೃದ್ದೆ ನಬಿಸಾ ಮಾತನಾಡಿ ಹತ್ತರಿಂದ ಇಪ್ಪತ್ತು ದಿನಗಳಿಂದ ನೀರಿನ ಸಮರ್ಪಕ ಪೂರೈಕೆ ಆಗುತ್ತಿಲ್ಲ,ನಾವು ಹಣವನ್ನು ಕೊಟ್ಟು ಕುಡಿಯುವ ನೀರನ್ನು ತರಿಸುವ ದುಸ್ಥಿತಿ ಎದುರಾಗಿದ್ದು, ಪಂಚಾಯಿತಿ ವತಿಯಿಂದ ನೀಡುವ ಟ್ಯಾಂಕರ್ ನೀರು ಒಂದರಿಂದ ಎರಡು ಬ್ಯಾರೆಲ್ ಸಿಗುತ್ತದೆ ಅಷ್ಟೇ, ಎಂದು ಬೇಸರ ವ್ಯಕ್ತಪಡಿಸಿದರು.

ಗೃಹಿಣಿ ಯರಾದ ಹಬೀಬಾ ಜುಬೇದ, ಗಿರಿಜಾ,ಪದ್ಮ, ಕುಡಿಯುವ ನೀರನ್ನು ಪೂರೈಸುವ ಬಾವಿಯ ಮೋಟಾರ್ ,ಸ್ವಿಚ್, ಹಾಳಾಗಿದೆ ಎಂದು ಪಂಚಾಯಿತಿಯವರು
ಸಬೂಬನ್ನು ಹೇಳುತ್ತಾ ಬರುತ್ತಿದ್ದು, ಬಾವಿಯಿಂದ ಕೆಸರು ಮಿಶ್ರಿತ ಕಲುಷಿತ ನೀರು ಬರುತ್ತಿದೆ ಇದರಿಂದ ಮನೆಯಲ್ಲಿರುವ ಮಕ್ಕಳು ಕಾಯಿಲೆಗಳಿಗೆ ಗೊತ್ತಾಗುತ್ತೆ ಎಂದು ಅಸಮಾಧಾನ ಹೊರಹಾಕಿದರು.
ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರುವಪ್ಪ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರಿಗೂ ಮನವಿ ಮಾಡಿದ್ದು ಸಂಪೂರ್ಣವಾಗಿ ಶಾಶ್ವತ ಪರಿಹಾರ ಕಲ್ಪಿಸಲು ನಾಲ್ಕು ಲಕ್ಷ ಅನುದಾನದ ಅವಶ್ಯಕತೆ ಇದೆ.
ಮಾಧ್ಯಮದಲ್ಲಿ ಸುದ್ದಿ ಪ್ರಕಟವಾದ ಬಳಿಕ ಪಂಚಾಯಿತಿ ವತಿಯಿಂದ ಬಾವಿಯ ಮೋಟಾರ್ ಮತ್ತು ಸ್ವಿಚ್ಚನ್ನು ದುರಸ್ತಿ ಮಾಡಲಾಗಿತ್ತು ಆದರೆ ಪುನಹ ಅದೇ ಪರಿಸ್ಥಿತಿ ಎದುರಾಗಿದ್ದು, ಟ್ಯಾಂಕರ್ ನಲ್ಲಿ ಒದಗಿಸುತ್ತಿರುವ ನೀರಿನ ಪೂರೈಕೆ ಸಾಕಾಗುತ್ತಿಲ್ಲ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿನೋದ್ ರಾಜ್, ಇಲಾರಿ ಮೇಸ್ತ್ರಿ ಭಾಗವಹಿಸಿದ್ದರು.
ಪಂಚಾಯಿತಿ ಪಿಡಿಒ ಸುರಯ್ಯ ಬಾನು ಪ್ರತಿಕ್ರಿಯೆ ನೀಡಿ ಈಗಾಗಲೇ ಜೆಜೆಎಂ ಯೋಜನೆಯ ನೀರಿನ ವ್ಯವಸ್ಥೆ ಕಲ್ಪಿಸಲು ಪತ್ರ ವ್ಯವಹಾರವನ್ನು ನಡೆಸಿ ಮನವಿ ಮಾಡಲಾಗಿದ್ದು, ಬಾವಿಯ ಮೋಟಾರ್ ಮತ್ತು ಸ್ವಿಚ್ ಅನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಟ್ಯಾಂಕರ್ ನ ಮೂಲಕ ನೀರನ್ನು ಪೂರೈಸಲಾಗುವುದು ಎಂದು ತಿಳಿಸಿದರು.


