November 25, 2026
;
24Mudigere1A

 

 

ಭದ್ರಾ ಅಭಯಾರಣ್ಯದಲ್ಲಿ ಕಾಡಾನೆಗಳು ನೆಲಸುವ ಬಗ್ಗೆ ವೈಜ್ಞಾನಿಕವಾದ ಮಾಹಿತಿ ಪಡೆಯದೇ ಏಕಾಏಕಿ ಬೇಲೂರಿನಿಂದ ಬಂದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸಾಗಿಸಲು ಮುಂದಾಗಿರುವ ಕ್ರಮ ಸರಿಯಲ್ಲ, ಬೇಲೂರಿನಿಂದ ಮೂಡಿಗೆರೆ ತಾಲೂಕು ಮೂಲಕ  ಕಾಡಾನೆಗಳನ್ನು ಸ್ಥಳಾಂತರಿಸುವ ಬಗ್ಗೆ ಮೊದಲು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಉಸ್ತುವರಿ ಸಚಿವರು, ಎಲ್ಲಾ ತಾಲೂಕಿನ ಶಾಸಕರು ಹಾಗೂ ರೈತರೊಂದಿಗೆ ಸಭೆ ನಡೆಸಿ, ಕಾಡಾನೆ ಸ್ಥಳಾಂತರದ ಬಗ್ಗೆ ವೈಜ್ಞಾನಿಕವಾದ  ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ ಹಾಸನ ಜಿಲ್ಲೆ ಉಸ್ತುವಾರಿ ಸಚಿವರು ಕೈಗೊಂಡ ದಿಢೀರ್ ನಿರ್ಧಾರದಿಂದ ಜನರು ಕೆರಳುವಂತಾಗಿದೆ. ಆದರೆ ಇನ್ನು ಕಾಲಹರಣ ಮಾಡದೇ ಉಪ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು ಎಲ್ಲಾ ಶಾಸಕರು ಮತ್ತು ರೈತರೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರ ಒದಗಿಸಬೇಕು. ಕೇವಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದರಿಂದ ಸಮಸ್ಯೆ  ಬಗೆಹರಿಯುವುದಿಲ್ಲವೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
  ಅವರು ಮಂಗಳವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂಗೌಡ ಮಾತನಾಡಿ, ಕಾಡು ಪ್ರಾಣಿಗಳಿಂದ ತಾಲೂಕಿನಲ್ಲಿ ಈಗಾಗಲೇ ಅನೇಕರ ಪ್ರಾಣ ಹಾನಿ, ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ಇದರಿಂದ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಇಂತಹ ಗಂಭೀರ ವಿಚಾರದ ಬಗ್ಗೆ ಸರಕಾರ ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕು. ಈಗಾಗಲೇ ಕಾಡಾನೆ ಓಡಿಸುವ ಬಗ್ಗೆ ತಾತ್ಕಾಲಿಕ ತಡೆ ಹಿಡಿಯಲಾಗಿದೆ. ಅವು ನೈಸರ್ಗಿಕವಾಗಿ ಎಲ್ಲಿ ಚಲಿಸುತ್ತವೆಯೋ ಆ ಮೂಲಕ ಕಾಡಿಗೆ ಓಡಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ರಾತ್ರಿ ವೇಳೆಯಲ್ಲಿ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಾನೆಗಳ ದಿಕ್ಕು ತಪ್ಪಿಸಿ ಓಡಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಅವಘಡ ಸಂಭವಿಸಿದರೆ ಅರಣ್ಯ ಇಲಾಖೆ ಹೊಣೆ ಹೊತ್ತುಕೊಳ್ಳಬೇಕೆಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎಂ.ಪಿ.ಮನು, ಜಿ.ಎಚ್.ಹಾಲಪ್ಪಗೌಡ, ಎಂ.ಎಂ. ಲಕ್ಷ್ಮಣ್‍ಗೌಡ, ಮೋಹಿದ್ದೀನ್‍ಸೇಟ್, ಇಂತಿಹಾಜ್ ಅಹಮ್ಮದ್, ಅಯೂಬ್, ಸಂಪತ್ ಮುಗ್ರಹಳ್ಳಿ, ಕೇಶವ ಸುವರ್ಣ, ಅಬೂಬಕರ್ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *