November 29, 2026
;
amanusha 3

 

 

ಕಾಫಿ ತೋಟದ ಮಾಲೀಕನೊಬ್ಬ ಬಂದೂಕು ಹಿಡಿದುಕೊಂಡು ಕಾರ್ಮಿಕರಿಗೆ ಬೆದರಿಸಿ, ದೊಣ್ಣೆಯಿಂದ ಮನಸೋಇಚ್ಚೆ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣಾ ವ್ಯಾಪ್ತಿಯ ಬಸಗೂಡು ಗ್ರಾಮದಲ್ಲಿ ನಡೆದಿದೆ. ಮಾಲೀಕ ಕಾರ್ಮಿಕರಿಗೆ, ಕಾರ್ಮಿಕ ಮಹಿಳೆಯರಿಗೆ ಹೊಡೆಯುತ್ತಿರುವ, ಬೈಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಸಗೂಡು ಗ್ರಾಮದ ಭರತ್ ವಿರುದ್ಧ ತಮಿಳು ಮೂಲದ ವಲಸೆ ಕಾರ್ಮಿಕರು ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.  ಬಂದೂಕು ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪ ಸಹ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ವಿಡಿಯೋ ವೈರಲ್‌ ಆಗಿದೆ. ಮಹಿಳೆಯೊಬ್ಬರು ನೆಲಕ್ಕೆ ಬಿದ್ದರೂ ಬಿಡದೇ ತೀವ್ರ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಕಂಡು ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿ ಭರತ್ ಒಂದು ಕೈಯಲ್ಲಿ ಬಂದೂಕು ಹಾಗೂ ಇನ್ನೊಂದು ಕೈಯಲ್ಲಿ ಮರದ ದೊಣ್ಣೆ ಹಿಡಿದು 4 ರಿಂದ 5 ಮಂದಿ ತಮಿಳುನಾಡು ಮೂಲದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಮೊದಲು ಪುರುಷ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ, ನಂತರ ಮಹಿಳಾ ಕಾರ್ಮಿಕರೊಬ್ಬರು ನೆಲಕ್ಕೆ ಬಿದ್ದರೂ ಬಿಡದೆ ದೊಣ್ಣೆಯಿಂದ ಮನಸೋಇಚ್ಛೆ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಮಹಿಳಾ ಕಾರ್ಮಿಕರಾದ ಮೀನಾ ಅವರು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಯ ವೇಳೆ ತಮ್ಮ ಚಿನ್ನದ ಕಿವಿಯೋಲೆ ಕಾಣೆಯಾಗಿದೆ ಎಂದೂ ಅವರು ದೂರಿದ್ದಾರೆ.

ತೋಟಕ್ಕೆ ಕೆಲಸಕ್ಕೆ ಬಂದಿದ್ದ ತಮಿಳುನಾಡು ಮೂಲದ ಕಾರ್ಮಿಕರ ತಂಡ ಕೆಲಸಕ್ಕೆಂದು ಅಡ್ವಾನ್ಸ್ ಪಡೆದುಕೊಂಡು ಕೇವಲ ಮೂರು ದಿನ ಕೆಲಸ ಮಾಡಿ ತಾವು ಬೇರೆ ತೋಟಕ್ಕೆ ಕೆಲಸಕ್ಕೆ ಹೋಗುತ್ತೇವೆ ಎಂದು ಹೊರಟ್ಟಿದ್ದಾರೆ. ಇದರಿಂದ ತೋಟದ ಮಾಲೀಕರು ಮತ್ತು ಕಾರ್ಮಿಕರ ನಡುವೆ ವಾಗ್ವಾದ ಪ್ರಾರಂಭವಾಗಿದ್ದು, ಅದು ಕೊನೆಗೆ ಅತಿರೇಕಕ್ಕೆ ತಿರುಗಿ ಕಾರ್ಮಿಕರು ಮಾಲೀಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಮಾಲೀಕ ಬಂದೂಕನ್ನು ತಂದು ಬೆದರಿಕೆ ಹಾಕಿದ್ದು, ಜೊತೆಗೆ ದೊಣ್ಣೆಯಿಂದ  ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ವಿವಿಧ ಸಂಘಟನೆಗಳು, ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ.

ಕಾರ್ಮಿಕರು ಮಾಲೀಕನ ಮೇಲೆ ಹಲ್ಲೆಗೆ ಬಂದಿದ್ದರೆ ಅದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದಿತ್ತು. ಅದನ್ನು ಬಿಟ್ಟು ಹೀಗೆ ಹಲ್ಲೆ ನಡೆಸಿರುವ ಕ್ರಮ ಖಂಡನೀಯ ಇದನ್ನು ಯಾರೂ ಸಹ ಒಪ್ಪುವಂತಹುದಲ್ಲ , ಇಂತಹ ಘಟನೆಗಳಿಂದ ಇಡೀ ಬೆಳೆಗಾರರ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಬೆಳೆಗಾರರು ಈ ಘಟನೆಯನ್ನು ಖಂಡಿಸಿದ್ದಾರೆ.

ಕಾರ್ಮಿಕರ ರಕ್ಷಣೆಗೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.  ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ತೋಟದ ಮಾಲೀಕ ಭರತ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಹೇಳಿಕೆ ಪಡೆದಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಚಿಕ್ಕಮಗಳೂರು ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *