kaadu 2

 

 

ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಸಾರಗೋಡು ರಕ್ಷಿತಾರಣ್ಯ ಪ್ರದೇಶದಲ್ಲಿ ವಾಸವಾಗಿರುವ ಎರಡು ಕುಟುಂಬಗಳ ಕರುಣಾಜನಕ ಕತೆ. ಎಪ್ಪತ್ತೈದು-ಎಂಬತ್ತರ ಆಸುಪಾಸಿನ ವಯೋವೃದ್ಧ ಕಟುಂಬಗಳೆರಡರ ಅರಣ್ಯ ರೋಧನ. ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ಈ ಕುಟುಂಬಗಳು ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಎಂದು ಸರ್ಕಾರಕ್ಕೆ ಗೋಗರೆದರು ಇವರ ಅಳಲನ್ನು ಕೇಳುವವರಿಲ್ಲ.

ಹೌದು ಇದು ಮೂಡಿಗೆರೆ ತಾಲ್ಲೂಕಿನ ಕುಗ್ರಾಮ ಮುಂಡಗೊಳಿಹರ ಎಂಬಲ್ಲಿ ಅರಣ್ಯದ ಮಧ್ಯದಲ್ಲಿ ವಾಸಿಸುತ್ತಿರುವ 2 ಕುಟುಂಬಗಳು ಅನುಭವಿಸುತ್ತಿರುವ ಮೂಕವೇದನೆ. ಇಲ್ಲಿಗೆ ರಸ್ತೆ ಸಂಪರ್ಕವಿಲ್ಲ. ಸುಮಾರು ಒಂದೂವರೆ ಕಿಲೋಮೀಟರ್ ಕಾಡೊಳಗಿನ ಕಾಲು ದಾರಿಯಲ್ಲಿ ನಡೆದೇ ಸಾಗಬೇಕು.

ಈಗ ಕಾಡಾನೆಗಳನ್ನು ಸೆರೆ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶದ ಹತ್ತಿರವೆ ಇವರಿರುವ ಜಾಗ. ನಿತ್ಯ ಕಾಡಾನೆಗಳು ಇವರ ಮನೆಬಾಗಿಲಿಗೆ ಬರುತ್ತವೆ. ಕಾಡುಪ್ರಾಣಿಗಳು ಮನೆಸುತ್ತಲೇ ಘೀಳಿಡುತ್ತವೆ.

ಒಂದು ಕುಟುಂಬದಲ್ಲಿ ಎಪ್ಪತ್ತೈದು ವಯಸ್ಸಿನ ರತ್ನಮ್ಮ ಹಾಗೂ ಅವರ ಪತಿ ಚಂದ್ರೇಗೌಡ ವಾಸವಾಗಿದ್ದಾರೆ. ಗಂಡ ಚಂದ್ರೇಗೌಡರಿಗೆ ಮಾತು ಬರುವುದಿಲ್ಲ. ರತ್ನಮ್ಮ ಇಳಿವಯಸ್ಸಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸಬೇಕು. ಇವರ ಮಗ ಬದುಕು ಅರಸಿ ಮಕ್ಕಳನ್ನು ಓದಿಸಬೇಕೆಂಬ ಅನಿವಾರ್ಯತೆಯಲ್ಲಿ ಹೊರಹೋಗಿದ್ದಾರೆ. ನಮಗೆ ಪರಿಹಾರ ನೀಡಿ ನಮ್ಮನ್ನು ಇಲ್ಲಿಂದ ಬೇರೆಡೆಗೆ ಕಳುಹಿಸಿಕೊಡಿ ಎಂದು ಇವರು ಸರ್ಕಾರವನ್ನು ಬೇಡಿಕೊಳ್ಳುತ್ತಿದ್ದಾರೆ. ಆದರೆ ಇವರ ಧ್ವನಿ ಅರಣ್ಯದೊಳಗೆ ಕ್ಷೀಣವಾಗಿ ಅಡಗಿ ಹೋಗುತ್ತಿದೆ.

ಹಾಗೆಯೇ ಇಲ್ಲಿ ವಾಸವಾಗಿರುವ ಮತ್ತೊಂದು ಕುಟುಂಬದಲ್ಲಿ 80 ವರ್ಷದ ವೃದ್ಧೆಯೊಬ್ಬರು ತನ್ನ ಮಗಸೊಸೆಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇವರ ಹೆಸರು ಲೋಕಮ್ಮ. 55 ವರ್ಷಗಳ ಹಿಂದೆ ಕಳಸ ಸಮೀಪದ ಯಳಂದೂರು ಗ್ರಾಮದಿಂದ ಇಲ್ಲಿಗೆ ವಲಸೆ ಬಂದಿದ್ದ ಇವರ ಕುಟುಂಬ ಇಲ್ಲಿ ಮೂರೆಕರೆ ಜಮೀನು ಹಸನು ಮಾಡಿಕೊಂಡು ಬದುಕು ಕಟ್ಟಿಕೊಂಡಿತ್ತು. ಈಗ ಇವರ ಪತಿ ರಾಮೇಗೌಡ ನಿಧನರಾಗಿದ್ದಾರೆ. ಇವರ 7 ಮಕ್ಕಳಲ್ಲಿ 3 ಮಂದಿ ಮರಣಹೊಂದಿದ್ದಾರೆ. ಇವರ ಮಗ ಸೊಸೆ ಚಿಕ್ಕ ಮೊಮ್ಮಗು ಕಾಡಿನೊಳಗೆ ಭಯದಿಂದಲೇ ಬದುಕು ನಡೆಸುತ್ತಿದ್ದಾರೆ. ಇನ್ನೆರಡು ವರ್ಷಕ್ಕೆ ಇವರ ಮೊಮ್ಮಗು ಶಾಲೆಗೆ ಸೇರಿಸಲು ಮಗಸೊಸೆ ಅನಿವಾರ್ಯವಾಗಿ ಊರುಬಿಡಬೇಕಾಗುತ್ತದೆ. ಇವರ ಕುಟುಂಬವರು ಸಹ ನಮಗೆ ಹೊರಗೆ ಜಮೀನು ನೀಡಿ ಎಂದು ಸರ್ಕಾರಕ್ಕೆ ಅಹವಾಲು ಸಲ್ಲಿಸಿದೆ.

2003-04ರಲ್ಲಿ ಸುಪ್ರೀಂಕೋರ್ಟ್ ಆದೇಶದ ಅನ್ವಯ ಈ ಗ್ರಾಮದಲ್ಲಿದ್ದ 18 ಕುಟುಂಬಗಳನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಕಳುಹಿಸಲಾಗಿದೆ. ಈ ಎರಡು ಕುಟುಂಬಗಳು 1974ಕ್ಕಿಂತ ಹಿಂದಿನಿಂದಲೂ ಇಲ್ಲಿ ವಾಸಿಸುತ್ತಿದ್ದರು ಎಂಬ ದಾಖಲೆಯ ಮೇರೆಗೆ ಇವರನ್ನು ಒಕ್ಕಲೆಬ್ಬಿಸಿರಲಿಲ್ಲ. ಹಾಗಾಗಿ ಊರೆಲ್ಲಾ ಖಾಲಿಯಾಗಿದ್ದರೂ ಎರಡು ಕುಟುಂಗಳು ಮಾತ್ರ ಅರಣ್ಯದೊಳಗೆ ಅತಂತ್ರ ಬದುಕು ನಡೆಸುತ್ತಿದ್ದಾರೆ.

ಇವರ ಸ್ಥಿತಿಯನ್ನು ಅರಿತು ಇಲ್ಲಿಗೆ ಭೇಟಿ ನೀಡಿದ್ದ ಸಮಾಜ ಸೇವಕ, ಭದ್ರ ಎಕೋ ಕನ್ಸರ್ವೇಟೀವ್ ಫೌಂಡೇಷನ್ ಅಧ್ಯಕ್ಷ ಡಾ. ಶಿವಪ್ರಸಾದ್ ಎಸ್.ಆರ್. ಇವರು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಜಿಲ್ಲಾಧಿಕಾರಿಗಳು. ಜಿ.ಪಂ. ಸಿಇಓ, ಅರಣ್ಯ ಅಧಿಕಾರಿಗಳಿಗೆ ಇವರ ಸ್ಥಿತಿಗಳನ್ನು

ಜಿಲ್ಲಾಧಿಕಾರಿ ಕೆ.ಎನ್. ರಮೇಶ್

ಖುದ್ದಾಗಿ ಭೇಟಿ ಮಾಡಿ ವಿವರಿಸಿದ್ದಾರೆ. ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ಈ ಕುಟುಂಬಗಳಿಗೆ ಸೂಕ್ತ ಪರಿಹಾರ ಅಥವಾ ಪುನರ್ವಸತಿ ನೀಡಿ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ರವರು ಇವರ ಸಮಸ್ಯೆಯನ್ನು ವಿವರವಾಗಿ ಆಲಿಸಿದ್ದು ಸೂಕ್ತ ವ್ಯವಸ್ಥೆಯ ಭರವಸೆ ವ್ಯಕ್ತಪಡಿಸಿದ್ದಾರೆ.

ಇದರಿಂದ ಇಲ್ಲಿನ ಕಾಡು ಪ್ರಾಣಿಗಳಿಗೂ ಅಡಚಣೆ ಆಗುವುದಿಲ್ಲ. ಇವರು ಇಲ್ಲಿಯೇ ಇದ್ದರೆ ಕಾಡಾನೆಗಳ ದಾಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಏಕೆಂದರೆ ಈಗ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದು ಮೂರು ಆನೆಗಳನ್ನು ಹಿಡಿದು ಸಾಗಿಸಿದ ಮೇಲೆ ಉಳಿದ ಆನೆಗಳು ರೊಚ್ಚಿನಿಂದ ಮನುಷ್ಯರ ಮೇಲೆ ಎರಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ದಟ್ಟ ಅರಣ್ಯದ ನಡುವಿರುವ ಈ ವೃದ್ಧ ಕುಟುಂಬಗಳಿಗೆ ಅಪಾಯ ಎದುರಾಗುವ ಸಂಭವವಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ