ಮೂಡಿಗೆರೆ ಪಟ್ಟಣದ ಎಂ.ಜಿ.ರಸ್ತೆ ಅಗಲಿಕರಣದ ಬಗ್ಗೆ ಚರ್ಚಿಸಲು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜನಪ್ರತಿನಿಧಿಗಳು, ರಾಜಕೀಯ ಪಕ್ಷ, ಸಂಘ ಸಂಸ್ಥೆ ಹಾಗೂ ಕಟ್ಟಡ ಮಾಲೀಕರ ಸಭೆ ನಡೆಯಿತು. ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಅರಂಭದಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆ ಮುಖಂಡರು, ಎಂ.ಜಿ.ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಹಾಗೂ ಪಾದಾಚಾರಿಗಳು ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾಗಿದೆ. ರಸ್ತೆ ಅಗಲೀಕರಣವಾದರೆ ವ್ಯಾಪಾರ ಹೆಚ್ಚುತ್ತದೆ. ಅಲ್ಲದೇ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಪ.ಪಂ. ದಿಟ್ಟ ನಿರ್ಧಾರ ಕೈಗೊಂಡು ಶೀಘ್ರವಾಗಿ ರಸ್ತೆ ಅಗಲೀಕರಣ ಮಾಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದರು. ಕೆಲ ಮುಖಂಡರು ರಸ್ತೆ ಅಗಲೀಕರಣ ಮಾಡದಿದ್ದರೆ ಎಂ.ಜಿ.ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಎಂ.ಜಿ. ರಸ್ತೆ ಕಟ್ಟಡ ಮಾಲೀಕರ ಪರವಾಗಿ ಎನ್.ಎನ್.ಪಿ. ಪ್ಲಾಜಾ ಕಟ್ಟಡದ ಮಾಲೀಕ ಎನ್.ಎನ್. ಪ್ರಸನ್ನ ಮಾತನಾಡಿ, ಅಗಲೀಕರಣದ ಸಭೆಯ ಬಗ್ಗೆ ಯಾವುದೇ ಕಟ್ಟಡ ಮಾಲೀಕರಿಗೆ ನೋಟೀಸು ನೀಡಿಲ್ಲ. ಏಕಾಏಕಿ ಸಭೆ ಕರೆಯಲಾಗಿದೆ. ರಸ್ತೆ ವಿಸ್ತರಿಸಲು ವಿರೋಧವಿಲ್ಲ. ಆದರೆ ಕಟ್ಟಡ ಒಡೆಯುವ ಮುನ್ನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್ ಮಾತನಾಡಿ, ಪಟ್ಟಣದ ರಸ್ತೆ ವಿಸ್ತರಣೆಗೆ ಪರಿಹಾರ ಸಿಗುವುದಿಲ್ಲ. ರಸ್ತೆ ಅಗಲೀಕರಣಕ್ಕೆ ವಿಶ್ವಾಸದಿಂದ ಸಭೆ ಕರೆಯಲಾಗಿದೆ. ನೋಟೀಸು ಕೊಡುವ ಸಮಯ ಒದಗಿ ಬಂದರೆ ಅದನ್ನು ಕೊಡಲಾಗುವುದು. ಬಲತ್ಕಾರದಿಂದ ಜಾಗ ಬಿಡಿಸುವ ಉದ್ದೇಶವಿಲ್ಲ. ಜಾಗ ಬಿಡುವುದಿಲ್ಲವೆಂಬ ಭಾವನೆ ಬೇಡ. ಕಟ್ಟಡದ ಮಾಲೀಕರೆಲ್ಲಾ ಮತ್ತೊಮ್ಮೆ ಚರ್ಚೆ ನಡೆಸಿ ಶೀಘ್ರವಾಗಿ ಅಭಿಪ್ರಾಯ ತಿಳಿಸಿ ಎಂದರು.
ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಪಟ್ಟಣದ ಸುಂದರವಾಗಿ ಕಾಣಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅಗಲೀಕರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪ.ಪಂ. ಅಧ್ಯಕ್ಷರಾದ ಜಿ.ಬಿ.ಧರ್ಮಪಾಲ್ ಮಾತನಾಡಿ, ನಿಯಮದ ಪ್ರಕಾರ ರಸ್ತೆಯಿಂದ 9 ಅಡಿ ಬಿಟ್ಟು ಕಟ್ಟಡ ಕಟ್ಟಬೇಕು. ಅಗಲೀಕರಣಕ್ಕೆ ಸಾರ್ವಜನಿಕರಿಂದ ತುಂಬಾ ಒತ್ತಾಯ ಇದೆ. ಈ ವಾರ ಪ.ಪಂ.ಯಲ್ಲಿ ನಿರ್ಣಯ ಕೈಗೊಂಡು 10 ಅಡಿ ವಿಸ್ತರಣೆ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುವುದು. ಅದರೊಳಗೆ ಎಲ್ಲರ ಅಭಿಪ್ರಾಯ ತಿಳಿಸಬೇಕೆಂದು ಮನವಿ ಮಾಡಿದರು.
ಪ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ಎಚ್.ಪಿ.ರಮೇಶ್, ಸುಧೀರ್, ಅನುಕುಮಾರ್, ಚಂದ್ರು, ಮಂಜು ಪಟೇಲ್, ಆಶಾ ಮೋಹನ್, ಸಿ.ಎಂ.ಗೀತಾ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಬಿಎಸ್‍ಪಿ ತಾಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್, ಸಿಪಿಐಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ರೋಟರಿ, ಲಯನ್ಸ್, ಜೇಸಿಐ, ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತರ ಸಂಘ, ಸಚೇತನ ಯುವ ಸಂಘ, ಕೆಂಪೇಗೌಡ ಯುವ ಒಕ್ಕಲಿಗರ ವೇದಿಕೆ, ವಾಹನ ಮಾಲೀಕರು ಮತ್ತು ಚಾಲಕರ ಸಂಘ, ಆಟೋ ಮಾಲೀಕರು ಮತ್ತು ಚಾಲಕರ ಸಂಘ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಎಂ.ಜಿ. ರಸ್ತೆ ಕಟ್ಟಡ ಮಾಲೀಕರು ಮತ್ತು ವರ್ತಕರು ಉಪಸ್ಥಿತರಿದ್ದರು.
ಮೂಡಿಗೆರೆ ಕೆ.ಎಂ.ರಸ್ತೆಯ ಅಗಲೀಕರಣಕ್ಕೂ ಇಲ್ಲಿನ ಶಾಸಕರು ಮತ್ತು ಪಟ್ಟಣ ಪಂಚಾಯಿತಿ ಕ್ರಮ ವಹಿಸಬೇಕು. ಎಲ್ಲಾ ಕಡೆ ತಾಲ್ಲೂಕು ಕೇಂದ್ರಗಳು ಸುಂದರವಾಗಿ ಕಾಣುತ್ತಿವೆ.

ಆದರೆ ಮೂಡಿಗೆರೆ ಮಾತ್ರ ಬದಲಾಗಿಲ್ಲ. ಯಾವ ಪಕ್ಷದ ಶಾಸಕರು ಗೆದ್ದರೂ, ಪಟ್ಟಣ ಪಂಚಾಯಿತಿಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರು ಇಲ್ಲಿನ ರಸ್ತೆಗಳನ್ನು ಅಗಲೀಕರಣ ಮಾಡಲಾಗಿಲ್ಲ. ರಸ್ತೆಗಳಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನರು ಪರದಾಡುವುದು ತಪ್ಪುತ್ತಿಲ್ಲ.


