nenapu 2

 

 

* ನಂದೀಶ್ ಬಂಕೇನಹಳ್ಳಿ
9663098873

ನಡೆದಷ್ಟು ದೂರವೂ ಸುಡುತ್ತಿದ್ದ ಸೂರ್ಯನ ಬಿಸಿಲಿಗೆ ನೆತ್ತಿ ಕಾದ ಬಾಣಲಿಯಾಗಿತ್ತು. ಬಾಲ್ಯದ ಊರಿಗೆ ಸುಮಾರು 20 ವರ್ಷದ ಮೇಲೆ ಬಂದಿದ್ದರಿಂದ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದ್ದ ಬಾಲ್ಯದ ಊರು ಬದಲಾದಂತೆ ಕಂಡಿತು.

ಸುತ್ತ ಬೆಟ್ಟಸಾಲಿನ ನಡುವೆ ಹತ್ತಿಪ್ಪತ್ತು ಮನೆಗಳು, ಒಂದು ಶಾಲೆ, ಪುಟ್ಟ ಅಂಗಡಿ, ಅಷ್ಟೆ ಇದ್ದ ಊರು ಇಂದು ಸಾಕಷ್ಟು ಬೆಳೆದಿತ್ತು. ಊರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಬಂದು, ಅದರ ಪಕ್ಕದಲ್ಲೆ ದೊಡ್ಡ ಗ್ರಾ.ಪಂ ಕಟ್ಟಡ ತಲೆ ಎತ್ತಿತ್ತು. ಬಾಲ್ಯದಲ್ಲಿ ಶಾಲೆಯ ಪಕ್ಕದಲ್ಲಿದ್ದ ಇಬ್ರಾಹಿಂ ಕಾಕನ ಪುಟ್ಟ ಗೂಡಂಗಡಿ ಮಾಯವಾಗಿ ಮೂರ್ನಾಲ್ಕು ಅಂಗಡಿಗಳು ತಲೆ ಎತ್ತಿದ್ದವು.

ಅಲ್ಲಿದ್ದ ಮೂರ್ನಾಲ್ಕು ಅಂಗಡಿಗಳಲ್ಲಿ ಒಂದು ಅಂಗಡಿಗೆ ಹೋಗಿ ಬಾಯಾರಿಕೆಗೆ ಶರಬತ್ತು ಕೊಂಡು ಕುಡಿಯತೊಡಗಿದೆ. ಅಂಗಡಿಯಲ್ಲಿ ಮೂವತ್ತರ ಆಸುಪಾಸಿನ ಯುವಕನೊಬ್ಬನಿದ್ದ. ಹಾಗೆ ಮಾತನಾಡುತ್ತಾ ‘ಇಲ್ಲಿ ಇಬ್ರಾಹಿಂ ಕಾಕ ಅಂತ, ಇದೇ ಜಾಗದಲ್ಲಿ ಗೂಡಂಗಡಿ ಮಾಡಿದ್ರು’ ಎಂದು ಇನ್ನೂ ವಾಕ್ಯ ಪೂರ್ಣ ಮಾಡುವಷ್ಟರಲ್ಲಿ ಅಂಗಡಿಯಲ್ಲಿದ್ದ ಆ ಯುವಕ ‘ಹ್ಞ. ಅವ್ರು ನಮ್ ತಂದೆ. ಅವ್ರಿಗೆ ವಯಸ್ಸಾಯ್ತು. ಅಂಗಡಿ ನೋಡಿಕೊಳ್ಳೋಕೆ ಆಗೋದಿಲ್ಲ. ಅದು ಅಲ್ದೆ ಈಗ ಊರಲ್ಲಿ ಅಂಗಡಿಗಳು ಜಾಸ್ತಿ ಆಗಿದ್ದಾವೆ. ಹಾಗಾಗಿ ನಾನೇ ಅಂಗಡಿ ನೋಡಿಕೊಳ್ತಾ ಇದ್ದೀನಿ’ ಎಂದ.

ಇಬ್ರಾಹಿಂ ಕಾಕನ ಗೂಡಂಗಡಿ ನಾನು ಓದಿದ ಎರಡು ಕೊಠಡಿಯ ಸರ್ಕಾರಿ ಶಾಲೆಯ ಸಮೀಪದಲ್ಲೆ ಇತ್ತು. ಅಂಗಡಿಯಲ್ಲಿ ಆಲ್ಕೋವಾ, ಶುಂಠಿ ಪೆಪ್ಪರಮೆಂಟು, ಕಡ್ಲೆ ಮಿಠಾಯಿ, ಉಪ್ಪುಕಡಲೆ ಮುಂತಾದ ತಿಂಡಿಗಳನ್ನು ಕೊಳ್ಳಲು ಸಂಜೆ ಹೋಗುವುದು ಖಾಯಂ ಆಗಿತ್ತು. ಕಾಕನ ಗೂಡಂಗಡಿಯ ಮುಂಭಾಗ ಹರಳುಪ್ಪಿನ ದೊಡ್ಡ ಮರದ ಗುಡಾಣವೊಂದಿತ್ತು. ಈಗೀನ ಹಾಗೆ ಚಿಕ್ಕ ಪ್ಯಾಕ್‍ಗಳಲ್ಲಿ ಹರಳಪ್ಪು ಆಗ ಬರುತ್ತಿರಲಿಲ್ಲ. ಉಪ್ಪು ಕೇಳಿದವರಿಗೆ ಆ ಮರದ ಗುಡಾಣದಿಂದ ಉಪ್ಪನ್ನು ತೆಗೆದು ಪ್ಲಾಸ್ಟಿಕ್ ಕವರ್‍ನಲ್ಲಿ ಹಾಕಿ ನೀಡಬೇಕಿತ್ತು.

ಉಪ್ಪನ್ನು ಯಾರು ಕದಿಯುವುದಿಲ್ಲ ಮತ್ತು ಕದಿಯ ಬಾರದು ಎಂಬ ನಂಬಿಕೆ ಇರುವುದರಿಂದ ಕಾಕ ಉಪ್ಪಿನ ಗುಡಾಣವನ್ನು ಗೂಡಂಗಡಿಯ ಹೊರ ಜಗಲಿಯಲ್ಲಿಯೇ ಇಟ್ಟಿರುತ್ತಿದ್ದರು. ಭಾನುವಾರ ಶಾಲೆಗೆ ರಜೆ ಇರುವುದರಿಂದ ಕಾಕನ ಗೂಡಂಗಡಿಗೂ ರಜೆ ಇರುತ್ತಿತ್ತು. ಭಾನುವಾರ ನಾವೆಲ್ಲಾ ಅಂದರೆ ಶಾಲೆಯ ಸಹಪಾಠಿಗಳು ಒಂದಷ್ಟು ಮಂದಿ ಶಾಲೆಯ ಹಿಂದಿನ ಸಾಲು ಸಾಲಾಗಿದ್ದ ಹುಣಸೆ ಮರಕ್ಕೆ ಕಲ್ಲೆಸೆದು ಬಾಯಿ ಚಪ್ಪರಿಸೋ ಹುಳಿ ಹುಳಿ ಹುಣಸೆ ಹಣ್ಣನ್ನು ಸಂಗ್ರಹಿಸಿ ಉಪ್ಪಿಗಾಗಿ ಕಾಕನ ಗೂಡಂಗಡಿಗೆ ಓಡುತ್ತಿದ್ದೆವು. ಮರದ ಗುಡಾಣದ ಅಗಲ ಮುಚ್ಚಳ ವನ್ನು ಸರಿಸಿ ಪುಟ್ಟ ಕೈಗಳಲ್ಲಿ ಚೂರೇ ಚೂರು ಹರಳುಪ್ಪನ್ನು ತೆಗೆದು ಹುಣಸೆಹಣ್ಣಿನೊಂದಿಗೆ ಬೆರಸಿ ಬಾಯಿಗಿಟ್ಟು ಚಪ್ಪರಿಸುತ್ತಿದ್ದೆವು.

ಅಂಗಡಿಯ ಮುಂದೆ ಶರಬತ್ತು ಹೀರುತ್ತಾ ಇದೆಲ್ಲಾ ನೆನಪಾಯಿತು. ಈಗ ಆ ಹರಳುಪ್ಪಿನ ಗುಡಾಣ ಮಾಯವಾಗಿ ಉಪ್ಪಿನ ಪೊಟ್ಟಣಗಳಿರುವ ಎರಡ್ಮೂರು ಉಪ್ಪಿನ ಮೂಟೆಗಳು ಜಗಲಿಯಲ್ಲಿದ್ದವು. ‘ನಿಮ್ಮ ಮನೆ ಎಲ್ಲಿ? ಅಪ್ಪ ಇದ್ದಾರೇನೂ ಮನೆಲ್ಲಿ? ಎಂದು ಅಂಗಡಿಯ ಆ ಯುವಕನನ್ನು ಕೇಳಿದೆ.

‘ಹ್ಞ ಇದ್ದಾರೆ. ಶಾಲೆ ದಾಟಿ ಚೂರು ಮುಂದೆ ಹೋದ್ರೆ ಎಡಗಡೆಗೆ ಹೋದ್ರೆ ಮೊದಲಿಗೆ ಸಿಗೋ ಹೆಂಚಿನ ಮನೆ’ ಎಂದ ಆ ಯುವಕ. ಅಲ್ಲಿಂದ ಹೊರಟ ವನು ಶಾಲೆಯ ಕಡೆಗೆ ನಡೆದೆ. ಆ ದಿನ ಶಾಲೆಗೆ ರಜೆ ಇತ್ತು. ಶಾಲೆಯ ಮುಂಚೆ ಇದ್ದ ಎರಡು ಕೊಠಡಿಯ ಪಕ್ಕ ಮತ್ತೆರಡು ಕೊಠಡಿಗಳು ನಿರ್ಮಾಣವಾಗಿದ್ದವು. ಶಾಲೆಯ ಹಿಂದಿನ ಹುಣಸೆಮರಗಳ ಕುರುಹುಗಳು ಇಲ್ಲದಂಥೇ ಮಾಯವಾಗಿ ಜಾಗದಲ್ಲಿ ಶಾಲಾ ಶೌಚಾಲಯದ ಕಟ್ಟಡ ನಿರ್ಮಾಣವಾಗಿತ್ತು.

ಶಾಲಾ ತರಗತಿಯ ತೆರದ ಕಿಟಕಿಯಿಂದ ಒಳ ಇಣುಕಿದೆ. ಗೋಡೆಯ ಕಪ್ಪು ಬೋರ್ಡ್, ಬೆಂಚುಗಳ ಸಾಲು, ಗೋಡೆಯ ಮೇಲಿದ್ದ ದೇಶ ನಾಯಕರ ಪೋಟೊಗಳು, ಬೋರ್ಡಿನ ಅಂಚಿನ ದಿನಾಂಕ ಎಲ್ಲವೂ ಬಾಲ್ಯದ ಶಾಲೆಯ ದಿನಗಳನ್ನು ನೆನಪಿಸಿದವು. ಶಾಲೆಯ ತರಗತಿಯ ಒಕ್ಕೊರಲಿನ ಕಂಠಪಾಠದ ಘೋಷ, ಸಮವಸ್ತ್ರ, ಬ್ಯಾಗು, ಪುಸ್ತಕ, ಪೆನ್ನು, ಪೆನ್ಸಿಲ್ ಮುಂತಾದವುಗಳ ಆತ್ಮೀಯ ಪ್ರಪಂಚದ ನೆನಪು ಮನಸ್ಸು ತುಂಬ ಹಾಯ್ ಎನಿಸಿತು.

ಹಾಗೇ ನೆನಪನ್ನು ಮೆಲುಕು ಹಾಕುತ್ತಾ ಶಾಲೆಯ ಗೇಟನ್ನು ದಾಟಿ ಮುಂದೆ ನಡೆಯತೊಡಗಿದೆ. ರಸ್ತೆ ಎಡಬದಿಗೆ ಇದ್ದ ಹೆಂಚಿನ ಮನೆಯ ಮುಂದೆ ನಿಂತೆ. ಮನೆಯ ಮುಂದೆ ನಿಂತ ಪುಟ್ಟ ಹುಡುಗನೊಬ್ಬ ‘ಉಮ್ಮಾ’ ಎನ್ನುತ್ತಾ ಮನೆಯೊಳಗೆ ಓಡಿ ಯಾರೋ ಬಂದಿರುವ ಸುದ್ದಿ ಮುಟ್ಟಿಸಿದ. ಮನೆಯ ಒಳಗಿಂದ ಮಹಿಳೆಯೊಬ್ಬರು ಬಂದರು. ನಾನು ಪರಿಚಯ ಮಾಡಿಕೊಂಡೆ. ಮನೆಯೊಳಗೆ ಮಂಚಕ್ಕೆ ಒರಗಿ ಇಬ್ರಾಹಿಂ ಕಾಕ ಮಲಗಿದ್ದರು. ಕೆದರಿದ ಬೆಳ್ಳಿ ಕೂದಲು, ಇಳಿದ ಕಣ್ಣುಗಳು, ಎರಡು ದಿನದ ಹಿಂದಷ್ಟೆ ಶೇವ್ ಮಾಡಿದಂತೆ ಬಿಳಿ ಕಪ್ಪು ಮಿಶ್ರಿತ ಗಡ್ಡಗೂದಲ ಆ ಮುಖದಲ್ಲಿ ದೇವರಂಥ ನಗು ಇತ್ತು.

‘ನಮ್ಮ ಸದಾನಂದನ ಮಗ ಅಲ್ವ. ಎಷ್ಟು ವರ್ಷ ಆಯ್ತು ನಿನ್ನ ನೋಡಿ, ಇಷ್ಟು ವರ್ಷದ ಮೇಲೆ ನೆನಪು ಮಾಡಿಕೊಂಡು ಬಂದ್ಯಲ್ಲ. ಖುಷಿ ಆಯ್ತು’ ಎಂದರು. ಅಷ್ಟರಲ್ಲಿ ಇಬ್ರಾಹಿಂ ಕಾಕನ ಹೆಂಡತಿ ಗಾಜಿನ ಲೋಟದಲ್ಲಿ ಟೀಯನ್ನು ಬಾಳೆಕಾಯಿಯ ಚಿಪ್ಸ್‍ನ್ನು ತಂದಿಟ್ಟರು.

‘ಮುಂಚೆಯಷ್ಟು ಮಕ್ಕಳಿಲ್ಲ ಈಗ ಶಾಲೆಲ್ಲಿ. ಮಕ್ಕಳು ತಿಂಡಿ, ಬಿಸ್ಕಟ್ಟು ಕೊಂಡ್ರೆ, ರಬ್ಬರು ಪೆನ್ಸಿಲ್ ಕೊಂಡ್ರೆ ಒಂದಷ್ಟು ವ್ಯಾಪಾರ. ಈಗ ಊರಿನ ಅರ್ಧಕರ್ಧ ಮಕ್ಕಳು ಪೇಟೆಯ ಇಂಗ್ಲೀಷ್ ಮೀಡಿಯಂ ಶಾಲೆಗೆ ಗಾಡಿಲ್ಲಿ ಹೋಗ್ತಾರೆ. ಊರಿನಲ್ಲೂ ಅಂಗಡಿಗಳು ಹೆಚ್ಚಾಯ್ತು. ವ್ಯಾಪಾರದ ರೀತಿಯೂ ಬದಲಾಯ್ತು. ಅದಕ್ಕೆ ಅಂಗಡಿಯನ್ನು ಮಗ ನಡೆಸ್ತಾ ಇದ್ದಾನೆ. ಅವ್ನು ಕೂಡ ಸೂಪರ್ ಮಾರ್ಕೇಟ್ ಮಾಡುವ ಅಂದಾಜಿನಲ್ಲಿದ್ದಾನೆ. ಅದಕ್ಕೆ ಬಂಡವಾಳವೂ ಬೇಕಲ್ಲ. ಎಂಥಾ ಮಾಡೋದಾ ಏನಾ. ದೇವರು ನಡೆಸಿದಂಗೆ ಹಾಗ್ತಾದೆ ಎಂದರು ಇಬ್ರಾಂಹಿ ಕಾಕ.

ಮನೆಯ ತುಂಬಾ ಅತ್ತರಿನ ಘಮಲು ತುಂಬಿತ್ತು. ಶಾಲೆಯ ವಾರ್ಷಿಕೋತ್ಸವವೊಂದರಲ್ಲಿ ಕಾಕನನ್ನು ಸನ್ಮಾನಿಸಿದ ಪೋಟೋ ವೊಂದು ಹಳೇ ಟಿವಿಯ ಮೇಲಿತ್ತು. ಟೀ ಕುಡಿದು, ಬರ್ತಿನಿ ಕಾಕ ಎಂದು ಹೇಳಿ ಅಲ್ಲಿಂದ ಹೊರಟೆ.

ಬದಲಾದ ಕಣ್ಣೆದುರಿನ ಊರಿಗಿಂತ ಮನದ ಬಾಲ್ಯದ ಆ ನೆನಪಿನ ಊರು ಹೆಚ್ಚು ಆಪ್ಯಾಯಮಾನವೆನಿಸಿತು.
*************

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ