ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಊರ ತುಂಬೆಲ್ಲಾ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಬ್ಯಾನರ್‍ಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.
ಕ್ಷೇತ್ರದ ಹೊರಗಿನ ಲಿಕ್ಕರ್ ಮಾಫಿಯಾದವರು, ಅಧಿಕಾರದಲ್ಲಿದ್ದಾಗ ಬಡಜನರ ಕಡೆಗೆ ತಿರುಗಿಯೂ ನೋಡದ ನಿವೃತ್ತ ಅಧಿಕಾರಿಗಳು, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಮೂಡಿಗೆರೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜಸೇವಕರು ಎಂಬ ಮುಖವಾಡದೊಂದಿಗೆ ಸಾಲಾಗಿ ಬರುತ್ತಿದ್ದಾರೆ. ಹಣಬಲದ ಮೂಲಕ ಕ್ಷೇತ್ರವನ್ನು ಕೊಂಡುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಓಡಾಡುತ್ತಿದ್ದಾರೆ. ಊರ ತುಂಬಾ ಎಲ್ಲೆಂದರಲ್ಲಿ ಅವರದೇ ಬ್ಯಾನರ್ ಗಳು ಜನರಿಗೆ ಕಿರಿಕಿರಿ ಉಂಟುಮಾಡುತ್ತಿವೆ. ಹಾಗಾದರೆ ಮೂಡಿಗೆರೆ ಕ್ಷೇತ್ರವೇನು ಮಾರಾಟಕ್ಕಿದೆಯೇ ? ಎಂದು ಸಿ.ಪಿ.ಐ. ಹಿರಿಯ ಮುಖಂಡ, ಊರುಬಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ಲಕ್ಷ್ಮಣ್ ಕುಮಾರ್ ಪ್ರಶ್ನಿಸಿದ್ದಾರೆ.
ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಬಡವರಿಗೆ ಸೂರು, ನಿವೇಶನ ಇಲ್ಲದೆ ಜನ ಬೀದಿಗಿಳಿಯುತ್ತಿದ್ದಾರೆ. ಕೃಷಿಕರು ಕಾಡಾನೆ, ಕಾಡುಪ್ರಾಣಿ ಹಾವಳಿ ಎದುರಿಸುತ್ತಿದ್ದಾರೆ. ಮೂಲಭೂತ ಸವಲತ್ತುಗಳು ಎಲ್ಲಾ ಕಡೆ ಸಮರ್ಪಕವಾಗಿ ದೊರಕಿಲ್ಲ.
ಸ್ಥಳೀಯವಾದ ಸಮಸ್ಯೆಗಳು, ಜನರ ನೋವುಗಳನ್ನು ಅರಿತು ಕೆಲಸ ಮಾಡಬೇಕು ಎಂದರೆ ಅದು ಸ್ಥಳೀಯರಿಂದಲೇ ಸಾಧ್ಯ. ಹೊರಗಿನವರು ಬಂದು ಇಲ್ಲಿ ಶಾಸಕರಾದರೆ ಅವರನ್ನು ಹುಡುಕಿಕೊಂಡು ಜನ ಬೆಂಗಳೂರಿಗೆ ಹೋಗಬೇಕಾಗಬಹುದು.
ಮೂಡಿಗೆರೆ ಮೀಸಲು ಕ್ಷೇತ್ರವಾಗಿದ್ದರೂ ಕ್ಷೇತ್ರದಲ್ಲಿಯೇ ಬಹಳಷ್ಟು ಮಂದಿ ವಿದ್ಯಾವಂತರು, ರಾಜಕೀಯ ಅನುಭವ ಇರುವವರು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಕ್ಷೇತ್ರದ ಮತದಾರರು ಕುರಿಗಳಲ್ಲ. ಇಲ್ಲಿನ ಜನರು ಬಹಳ ಪ್ರಜ್ಞಾವಂತರು. ಮೂಡಿಗೆರೆ ಕ್ಷೇತ್ರವೇನು ಮಾರಾಟಕ್ಕೆ ಇಟ್ಟಿಲ್ಲ. ಹೊರಗಿನವರು ದುಡ್ಡಿನ ಬಲದಿಂದ ಇಲ್ಲಿ ರಾಜಕೀಯ ಮಾಡುತ್ತೇವೆ ಎಂಬ ಮನೋಭಾವನೆಯನ್ನು ಜನ ಅರಿಯದಷ್ಟು ದಡ್ಡರಲ್ಲ ಎಂದಿದ್ದಾರೆ.
ಕ್ಷೇತ್ರದ ತುಂಬಾ ಬ್ಯಾನರ್ ಭರಾಟೆಯಿಂದ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇದನ್ನು ಜನಸಾಮಾನ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳೇ ಆಗಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸ್ಥಳೀಯರಿಗೆ ಅವಕಾಶ ನೀಡಬೇಕು. ಜನರು ಸಹ ಸ್ಥಳೀಯರು ಮತ್ತು ಸಾಮಾನ್ಯ ಜನರ ಪರವಾಗಿ ಇರುವವರಿಗೆ ತಮ್ಮ ಬೆಂಬಲ ನೀಡುವಂತಾಗಬೇಕು ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಯದ್ವಾತದ್ವಾ ಬ್ಯಾನರ್ ಆಳವಡಿಸಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. ಪಟ್ಟಣದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅಳವಡಿಸಿರುವ ಬ್ಯಾನರ್ ಗಳಿಗೆ ಅನುಮತಿ ಪಡೆಯಲಾಗಿದೆಯಾ ? ಎಂದು ಅವರು ಪ್ರಶ್ನಿಸಿದ್ದಾರೆ.
https://www.darpananews.com/2022/12/31/b-k-sundresh-28-th-year-of-memories/





