ಡಿ.ಎಲ್. ಅಶೋಕ್
ಕರ್ನಾಟಕ ರಾಜ್ಯ ಸರ್ಕಾರವು ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬೆಳೆಗಾರರು ಸಾಗುವಳಿ ಮಾಡಿರುವ ಒತ್ತುವರಿ ಜಮೀನು ಗುತ್ತಿಗೆ ನೀಡಲು ಅನುಮೋದನೆ ನೀಡಿದೆ. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಿದೆ. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗಳಿಗೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರಕ್ಕೆ ಕೃಷಿಕ ಸಮಾಜ ಅಭಿನಂದನೆ ಸಲ್ಲಿಸುತ್ತದೆ ಎಂದು ಮೂಡಿಗೆರೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್, ಬಾಳೆಗದ್ದೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಒತ್ತುವರಿ ಗುತ್ತಿಗೆ ಕಾಯ್ದೆ ಮಾತ್ರವಲ್ಲದೇ ಭೂಕಬಳಿಕೆ ಕಾಯ್ದೆಗೆ ತಿದ್ದುಪಡಿ ತಂದು ಕಾಯ್ದೆಯಿಂದ ಗ್ರಾಮೀಣ ಭಾಗದ ರೈತರನ್ನು ಹೊರಗಿಟ್ಟಿರುವುದು ಶ್ಲಾಘನೀಯ, ಕಾಫಿ ಬೆಳೆಗಾರರಿಗೆ 10 ಹೆಚ್‍ಪಿ. ವರೆಗೆ ಉಚಿತ ವಿದ್ಯುತ್ ನೀಡಿರುವುದು ಕಾಫಿ ಬೆಳೆಗಾರರಿಗೆ ಅನುಕೂಲಕರವಾಗಿದೆ.
ಸರ್ಕಾರಿ ಜಮೀನಿನ ಒತ್ತುವರಿ ಸಮಸ್ಯೆ ಸಂಬಂಧಿಸಿದಂತೆ ಜಮೀನನ್ನು ಕೇರಳ ಮಾದರಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಬೇಕು ಎಂಬುದು ಬಹುವರ್ಷಗಳ ರೈತರ ಬೇಡಿಕೆಯಾಗಿತ್ತು. ಈ ಹಿಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದವು. ಈಗಿನ ಬಸವರಾಜು ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಅದಕ್ಕಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು, ಕಂದಾಯ ಸಚಿವರಾದ ಆರ್.ಅಶೋಕ್, ಇಂದನ ಸಚಿವರಾದ ಸುನೀಲ್ ಕುಮಾರ್, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿರೋಧ ಪಕ್ಷದ ನಾಯಕರು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ ಕೆಜಿಎಫ್, ಉಪಾಸಿ, ಕೃಷಿಕ ಸಮಾಜ, ರೈತ ಸಂಘ, ತಾಲ್ಲೂಕು ಮತ್ತು ಹೋಬಳಿ ಮಟ್ಟದ ಎಲ್ಲಾ ಬೆಳೆಗಾರರ ಸಂಘಗಳಿಗೆ ಕೃಷಿಕ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕಾಯ್ದೆಗಳನ್ನು ಅಧಿಕಾರಿಗಳು ನ್ಯಾಯಸಮ್ಮತವಾಗಿ ರೈತರಿಗೆ ಅನುಕೂಲಕರವಾಗಿ ಯಾವುದೇ ಗೊಂದಲಗಳಿಗೆ ಅವಕಾಶ ಆಗದಂತೆ ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದಾರೆ.
ಹಾಗೆಯೇ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿದಿದ್ದು ಅದಕ್ಕಾಗಿ ಅರಣ್ಯ ಇಲಾಖೆಗೆ ಕೃಷಿಕ ಸಮಾಜ ಅಭಿನಂದನೆ ಸಲ್ಲಿಸುತ್ತದೆ. ಇನ್ನುಳಿದಿರುವ ಕಾಡಾನೆಗಳನ್ನು ಆದಷ್ಟು ಬೇಗ ಸೆರೆಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.



