ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ತಾನು ಪ್ರಭಲ ಆಕಾಂಕ್ಷಿಯಾಗಿದ್ದೇನೆಂದು ಬಿಜೆಪಿ ಎಸ್ಸೀ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಜೈಪಾಲ್ ಬಿದರಹಳ್ಳಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಅವರು ನನಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಅವರಿಗೆ ಮನವಿ ಪತ್ರ ನೀಡಿದ್ದೇನೆ. ತಾನು ಬಿಜೆಪಿ ಪಕ್ಷದಲ್ಲಿ ಕಳೆದ 23 ವರ್ಷದಿಂದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಮೂಡಿಗೆರೆ ಮಂಡಲದ ಎಸ್ಸೀ ಮೋರ್ಚಾದ ಅಧ್ಯಕ್ಷನಾಗಿ, ಜಾವಳಿ ಮತ್ತು ನಿಡುವಾಳೆ ಗ್ರಾ.ಪಂ. ವಿಸ್ತರಕನಾಗಿ ಕಾರ್ಯ ನಿರ್ವಹಿದ್ದು, ಪ್ರಸ್ತುತ ಎಸ್ಸೀ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.
ಮೂಡಿಗೆರೆ ಕ್ಷೇತ್ರದ ಎಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಚಿರಪರಿಚಿತನಾಗಿದ್ದೇನೆ. ತಾನು ರಾಜಕೀಯ ಕ್ಷೇತ್ರವಲ್ಲದೇ ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆಂದು ಎಂದರು.
ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಐಟಿಸಿ ಕ್ಯಾಂಪ್ ಪೂರ್ಣಗೊಳಿಸಿದ್ದೇನೆ. ಪ್ರವಾಹ ಸಂದರ್ಭದಲ್ಲಿ ಜನರ ಸೇವೆ, ಹಿಂದೂಪರ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಹಾಗಾಗಿ ಜನರ ಸೇವೆ ಸಲ್ಲಿಸಲು ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೇನೆ.
ಪಕ್ಷದ ವರಿಷ್ಠರ ತೀರ್ಮಾನಕ್ಕೆ ಸದಾ ಬದ್ಧನಾಗಿದ್ದು, ನನ್ನ ಪಕ್ಷನಿಷ್ಠೆಯನ್ನು ಪರಿಗಣಿಸಿ ಜನರ ಸೇವೆ ಮಾಡಲು ಆಸಕ್ತಿ ಹೊಂದಿರುವ ನನಗೆ ಪಕ್ಷ ಅವಕಾಶ ನೀಡಬೇಕೆಂದು ಕೋರಿದ್ದೇನೆ ಎಂದಿದ್ದಾರೆ.





