ಪ್ರೀತಿಸಿದ ಯುವಕ ವಂಚಿಸಿದ್ದಾನೆ ಎಂದು ಮನನೊಂದು ಅಪ್ರಾಪ್ತ ಕಾಲೇಜು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಳಸ ತಾಲ್ಲೂಕು ಸಂಸೆ ಸಮೀಪದ ಘಟನೆ. ಕಳಸ ತಾಲ್ಲೂಕಿನ ಉಕ್ಕಡ ಜೋಗಿಕುಂಬ್ರಿ ಗ್ರಾಮದ ಚನ್ನಪ್ಪ ಗೌಡ ರವರ ಮಗಳು ದೀಪ್ತಿ (17ವರ್ಷ) ಆತ್ಮಹತ್ಯೆಗೆ ಶರಣಾದ ಯುವತಿ. ಕಳಸ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ದೀಪ್ತಿ.
ಜನವರಿ 10ರಂದು ಮನೆಯಲ್ಲಿದ್ದ ಕಳೆನಾಶಕ ಸೇವಿಸಿದ್ದ ದೀಪ್ತಿ ತೀವ್ರ ಅಸ್ವಸ್ಥಗೊಂಡು ಮಂಗಳೂರು ಏ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಈ ಸಂಬಂಧ ಯುವತಿ ಡೆತ್ ನೋಟ್ ನಲ್ಲಿ ನಿತೇಶ್ ಎಂಬ ಯುವಕನ ಹೆಸರು ಬರೆದಿದ್ದಾಳೆ.
ನಿತೇಶ್ ಕಳಸ ಸಮೀಪದ ಕಾರ್ಗದ್ದೆ ಕೂಡ್ಲೆ ಗ್ರಾಮದವನೆಂದು ತಿಳಿದುಬಂದಿದೆ. ಸ್ಥಳೀಯ ಭಜರಂಗದಳ ಮತ್ತು ಬಿ.ಜೆ.ಪಿ.ಯ ಸಕ್ರಿಯ ಕಾರ್ಯಕರ್ತನೆಂದು ತಿಳಿದುಬಂದಿದೆ. ಬಜರಂಗದಳ ಸಂಸೆ ಘಟಕದ ಸಂಯೋಜಕನಾಗಿದ್ದ ಎನ್ನಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ನಿತೇಶ್ ನನ್ನು ಭಜರಂಗದಳದಿಂದ ಹೊರಹಾಕಲಾಗಿದೆ. ಈ ಬಗ್ಗೆ ಬಜರಂಗದಳ ಕಳಸ ಪ್ರಖಂಡ ಪ್ರಮುಖ್ ಸಂತೋಸ್ ಪ್ರಕಟಣೆ ನೀಡಿದ್ದಾರೆ. ನಿತೇಶ್ ಕಾರ್ಗದ್ದೆ ನಡತೆಯಲ್ಲಿ ಕೆಲವೊಂದು ಲೋಪದೋಷಗಳಿದ್ದು, ಸಂಘಟನೆ ಸಿದ್ದಾಂತಕ್ಕೆ ವಿರುದ್ಧವಿದ್ದ ಕಾರಣ ಸಂಘಟನೆಯ ಜವಾಬ್ದಾರಿಯಿಂದ ತೆರವುಗೊಳಿಸಲಾಗಿದೆ ಎಂದಿದ್ದಾರೆ.
ಮಗಳ ಆತ್ಮಹತ್ಯೆ ಸಂಬಂಧ ಕುದುರೆಮುಖ ಠಾಣೆಗೆ ದೀಪ್ತಿ ತಂದೆ ದೂರು ನೀಡಿದ್ದಾರೆ. ಕುದುರೆಮುಖ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ನಿತೇಶ್ ಈಗ ತಲೆಮರೆಸಿಕೊಂಡಿದ್ದಾನೆ.



