ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಖಾಂಡ್ಯ ಹೋಬಳಿ ಬಿದಿರೆ ಗ್ರಾಮದ ಬಳಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡಿಕ್ಕಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತಪಟ್ಟವರನ್ನು ಬಿದಿರೆ ಗ್ರಾಮದ ಪ್ರವೀಣ್ (33 ವರ್ಷ) ಮತ್ತು ಪ್ರಕಾಶ್ (30 ವರ್ಷ) ಎಂದು ಗುರುತಿಸಲಾಗಿದೆ. ಇವರಿಬ್ಬರು ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು ಎಂದು ತಿಳಿದುಬಂದಿದೆ. ಇವರಿಬ್ಬರು ಬೈಕಿನಲ್ಲಿ ಹೋಗುತ್ತಿರುವಾಗ ರಮೇಶ್ ಎಂಬಾತ ಬಂದೂಕಿನಿಂದ ಗುಂಡು ಹಾರಿಸಿದ್ದು ಒಂದೇ ಗುಂಡೇಟು ಇಬ್ಬರ ಎದೆಯ ಮೂಲಕ ಹಾದುಹೋಗಿದ್ದು ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡಿನ ದಾಳಿ ನಡೆಸಿದ ರಮೇಶ್ ನನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



