ಮಹಾಶಿವರಾತ್ರಿ ಹಿನ್ನಲೆ ಧರ್ಮಸ್ಥಳಕ್ಕೆ ಲಕ್ಷಾಂತರ ಭಕ್ತಾಧಿಗಳು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಮೂಲಕ ಪಾದಯಾತ್ರೆಯಲ್ಲಿ ಸಾಗಿದ್ದು, ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮಾಸ್ಟರ್ ಪ್ಲಾನ್ ರೂಪಿಸಿದ್ದರೂ ಪಾದಯಾತ್ರಿಗರ ಸ್ವಚ್ಛತೆಯ ಕುರಿತ ನಿರ್ಲಕ್ಷ್ಯದಿಂದಾಗಿ ಚಾರ್ಮಾಡಿ ಘಾಟ್ ಉದ್ದಕ್ಕೂ ಕಸದ ರಾಶಿ ಬಿದ್ದಿದೆ.
ಕಳೆದ ಕೆಲ ವರ್ಷಗಳಲ್ಲಿ ಪಾದಯಾತ್ರೆ ಸಂದರ್ಭದಲ್ಲಿ ಉಂಟಾಗುತ್ತಿದ್ದ ಪರಿಸರ ಮಾಲಿನ್ಯವನ್ನು ತಪ್ಪಿಸಲು ಈ ವರ್ಷ ಜಿಲ್ಲಾಡಳಿತ ಮಾಸ್ಟರ್ ಪ್ಲಾನ್ ರೂಪಿಸಿತ್ತು. ಪಾದಯಾತ್ರೆ ಮಾರ್ಗದ ಪ್ರತಿ 500 ಮೀಟರ್‍ಗೆ ಕಸದ ಚೀಲಗಳನ್ನು ಇರಿಸಿ ಚೀಲಗಳ ಬಳಿ ಸ್ವಚ್ಛತೆ ಕಾಪಾಡಿ ಸೂಚನಾ ಫಲಕಗಳನ್ನು ಹಾಕಲಾಗಿತ್ತು.. ಮಾರ್ಗದಲ್ಲಿ ಸಿಗುವ ಸರ್ಕಾರಿ ಕಟ್ಟಡಗಳು, ಸಮುದಾಯ ಭವನ, ಶಾಲೆ ಅಂಗನವಾಡಿ ಮುಂತಾದ ಕಡೆಗಳಲ್ಲಿನ ಶೌಚಾಲಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಧ್ವನಿವರ್ದಕದ ಮೂಲಕ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಮೂಡಿಸಲಾಗಿತ್ತು. ವೈದ್ಯರು, ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರ ತಂಡ ಪಾದಯಾತ್ರಿಗರಿಗಾಗಿ ಆರೋಗ್ಯ ಕ್ಯಾಂಪ್‍ಗಳಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿ ಚಾರ್ಮಾಡಿ ಘಾಟ್‍ನ ಮಲಯಮಾರುತ, ಜೇನುಕಲ್ಲು ಮತ್ತು ಕೊಟ್ಟಿಗೆಹಾರದಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಲಾಗಿತ್ತು.

ಕಸದ ಚೀಲ ಇದ್ದರೂ ಎಲ್ಲೆಂದರಲ್ಲಿ ಕಸದ ರಾಶಿ
ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಚಾರ್ಮಾಡಿ ಘಾಟ್ ಅರಣ್ಯದ ನಡುವೆ ಹಾದು ಹೋಗಿದ್ದು ಪಾದಯಾತ್ರಿಗರು ಚಾರ್ಮಾಡಿ ಘಾಟ್ ಉದ್ದಕ್ಕೂ ಅಲ್ಲಲ್ಲಿ ಕಸದ ಚೀಲಗಳನ್ನು ಅಳವಡಿಸಿದರೂ ಕೂಡ ತ್ಯಾಜ್ಯವನ್ನು ಕಸದ ಚೀಲಕ್ಕೆ ಹಾಕದೇ ಎಲ್ಲೆಂದರಲ್ಲಿ ಎಸೆದ ಪರಿಣಾಮ ತ್ಯಾಜ್ಯ ರಾಶಿ ರಸ್ತೆ ಬದಿಯ ಅರಣ್ಯ ಪ್ರದೇಶವನ್ನು ಸೇರುತ್ತಿದೆ.

ಲಕ್ಷಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು
ಪಾದಯಾತ್ರಿಗಳಿಗೆ ವಿವಿಧ ಸಂಘಸಂಸ್ಥೆಗಳು, ದಾನಿಗಳು ರಸ್ತೆ ಉದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ವಿತರಿಸಿದ್ದು ಪಾದಯಾತ್ರಿಗಳು ನೀರನ್ನು ಕುಡಿದು ಖಾಲಿ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆದ ಪರಿಣಾಮ ಲಕ್ಷಕ್ಕೂ ಹೆಚ್ಚು ಕುಡಿಯುವ ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿಗಳು ರಸ್ತೆ ಬದಿಯಲ್ಲಿ ಸಂಗ್ರಹವಾಗಿದೆ. ಅನ್ನದಾನದಲ್ಲಿ ತೊಡಗಿದ ಕೆಲ ಸಂಘಸಂಸ್ಥೆಗಳು ಅಡಿಕೆ ಹಾಳೆಯ ತಟ್ಟೆಗಳನ್ನು ಬಳಸಿದ್ದರೆ ಹಲವರು ಪ್ಲಾಸ್ಟಿಕ್ ತಟ್ಟೆಗಳನ್ನು ಬಳಸಿದ್ದು ಬಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ.

ನದಿಮೂಲ, ವನ್ಯಮೃಗಗಳಿಗೆ ಕಂಟಕವಾದ ತ್ಯಾಜ್ಯ
ಚಾರ್ಮಾಡಿ ಘಾಟ್ ನಲ್ಲಿ ಹರಿಯುವ ರಸ್ತೆ ಬದಿಯ ಹಲವು ತೊರೆಗಳ ನೀರು ನೇತ್ರಾವತಿ ನದಿಯನ್ನು ಸೇರುತ್ತದೆ. ಚಾರ್ಮಾಡಿ ಘಾಟ್‍ನ ತೊರೆಗಳಿಗೂ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ಸೇರಿದ್ದು ನದಿಮೂಲಗಳು ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಜೊತೆಗೆ ರಸ್ತೆ ಬದಿಯಲ್ಲಿರುವ ಮಂಗ, ಮುಸಿಯ ಮುಂತಾದ ವನ್ಯಮೃಗಗಳು ಪ್ಲಾಸ್ಟಿಕ್ ಲೋಟ, ತಟ್ಟೆಗಳಲ್ಲಿರುವ ಆಹಾರ ತ್ಯಾಜ್ಯಗಳನ್ನು ತಿನ್ನುವುದರಿಂದ ಅವುಗಳ ಪ್ರಾಣಗಳಿಗೂ ಕುತ್ತು ಬರುವ ಆತಂಕ ಎದುರಾಗಿದೆ.

ನದಿತೀರಗಳಲ್ಲಿ ದುರ್ವಾಸನೆ
ಬಣಕಲ್, ಕೊಟ್ಟಿಗೆಹಾರ ಸಮೀಪದ ನದಿತೀರಗಳಲ್ಲಿ ಪಾದಯಾತ್ರಿಗರು ಮಲಮೂತ್ರ ವಿಸರ್ಜನೆ ಮಾಡಿದ್ದರಿಂದಾಗಿ ದುರ್ವಾಸನೆ ಬೀರುತ್ತಿದ್ದು ಮುಂದಿನ ಬಾರಿಯ ಪಾದಯಾತ್ರೆಯ ಸಂದರ್ಭದಲ್ಲಿಯಾದರೂ ತಾತ್ಕಾಲಿಕ ಶೌಚಾಲಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುವ ಅಗತ್ಯವಿದೆ.
ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ಮಾಸ್ಟರ್ ಪ್ಲಾನ್
ಗೋಣಿಬೀಡಿನಿಂದ ಕೊಟ್ಟಿಗೆಹಾರದವರೆಗೂ ಸ್ವಚ್ಛತೆ ನಿರ್ವಹಣೆಗಾಗಿ ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ 23 ಗ್ರಾ.ಪಂ ಯ ಪಿಡಿಓ, ಕಾರ್ಯದರ್ಶಿಗಳು, ಸಿಬ್ಬಂದಿ, ಕಸ ವಿಲೇವಾರಿ ವಾಹನ ಸಿಬ್ಬಂದಿ ಇರುವ 22 ತಂಡಗಳನ್ನು ರಚಿಸಿ ತಂಡದ ಮೂಲಕ ಪಾದಯಾತ್ರೆ ಹಾದು ಹೋಗುವ ಆಯಾ ಗ್ರಾ.ಪಂ ಸರಹದ್ದಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಗೋಣಿಬೀಡಿನಿಂದ ಕೊಟ್ಟಿಗೆಹಾರದವರೆಗೂ ರಸ್ತೆ ಇಬ್ಬದಿ ಸ್ವಚ್ಛಗೊಂಡಿದೆ.
ಆದರೆ ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಊಟ, ಉಪಹಾರ, ನೀರು, ಪಾನಕ ವಿತರಣೆ ಮಾಡಿದ ಪರಿಣಾಮವಾಗಿ ಬಾರಿ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದೆ.
‘ಗೋಣಿಬೀಡಿನಿಂದ ಕೊಟ್ಟಿಗೆಹಾರದವರೆಗೂ ಸ್ವಚ್ಛತೆ ನಿರ್ವಹಣೆ ವ್ಯವಸ್ಥಿತವಾಗಿ ನಡೆದಿದೆ. ಮುಂದಿನ ವರ್ಷದಿಂದ ವಿವಿಧ ಇಲಾಖೆಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಕಾರ್ಯ ನಿರ್ವಹಿಸಲಾಗುವುದು. ದಾನಿಗಳು ಊಟ, ಉಪಹಾರ, ನೀರು, ಪಾನಕ ವಿತರಣೆ ಮಾಡಲು ನಿರ್ದಿಷ್ಟ ಸ್ಥಳಗಳಲ್ಲಿ ಅವಕಾಶ ನೀಡಿ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ’
-ಹರ್ಷಕುಮಾರ್, ಮೂಡಿಗೆರೆ ತಾಪಂ ಇಓ
‘ಪಾದಯಾತ್ರೆ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣೆ ಅತ್ಯಂತ ಸವಾಲಿನ ಕಾರ್ಯವಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸ್ವಚ್ಛತೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಂಡರೂ ಪರಿಣಾಮಕಾರಿಯಾಗಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಸ್ವಚ್ಚತೆ ನಿರ್ವಹಣೆ ವಿಶೇಷ ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಮನವಿ ಮಾಡಬೇಕು’
-ಸಂಜಯಗೌಡ ಕೊಟ್ಟಿಗೆಹಾರ, ಸಾಮಾಜಿಕ ಕಾರ್ಯಕರ್ತ
ನಿರ್ದಿಷ್ಟ ಸ್ಥಳಗಳಲ್ಲಿ ಅನ್ನ, ನೀರು, ಹಣ್ಣು ಹಂಪಲು ದಾನಕ್ಕೆ ಅವಕಾಶ
ಸಂಘಸಂಸ್ಥೆಗಳು, ದಾನಿಗಳು, ಊಟ, ಉಪಹಾರ, ತಂಪು ಪಾನೀಯ, ಕಲ್ಲಂಗಡಿ, ಬಾದಾಮಿ ಹಾಲು ಮುಂತಾದವುಗಳನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಿತರಣೆ ಮಾಡಿ ಹೋಗುತ್ತಾರೆ. ಆದರೆ ಅಲ್ಲಿ ಸಂಗ್ರಹವಾಗುವ ತಟ್ಟೆ, ಲೋಟ, ಬಾಟಲಿ ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸುವುದಿಲ್ಲ. ತ್ಯಾಜ್ಯ ಹಾಕಲು ತೊಟ್ಟಿಗಳನ್ನು ಇಟ್ಟಿರುವುದರಿಲ್ಲ. ಇದರಿಂದ ತ್ಯಾಜ್ಯ ಎಲ್ಲೆಂದರಲ್ಲಿ ರಾಶಿ ಆಗುತ್ತಿದೆ. ಪಾದಯಾತ್ರಿಗರಿಗೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಊಟ ಉಪಹಾರ, ಪಾನೀಯಗಳನ್ನು ವಿತರಿಸಲು ಅವಕಾಶ ಕಲ್ಪಿಸಿ ಅಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬಹುದಾಗಿದೆ.
ಪ್ಲಾಸ್ಟಿಕ್ ಮುಕ್ತ ಪಾದಯಾತ್ರೆಗೆ ಆದ್ಯತೆಯಾಗಲಿ
ಪಾದಯಾತ್ರೆ ಸಾಗುವ ಮಾರ್ಗದುದ್ದಕ್ಕೂ ವಿವಿಧ ಸಂಘಸಂಸ್ಥೆಗಳು, ದಾನಿಗಳು, ಊಟ, ಉಪಹಾರ, ನೀರು, ತಂಪುಪಾನೀಯಗಳನ್ನು ಪ್ಲಾಸ್ಟಿಕ್ ಲೋಟ, ತಟ್ಟೆ, ಬಾಟಲಿಗಳಲ್ಲಿ ನೀಡುತ್ತಿದ್ದು ಇದರಿಂದ ಬಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಪ್ಲಾಸ್ಟಿಕ್ ಬದಲಾಗಿ ಅಡಿಕೆ ಹಾಳೆ, ಪೇಪರ್ ತಟ್ಟೆ, ಸ್ಟೀಲ್ ಲೋಟಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಪಾದಯಾತ್ರೆಗೆ ಜಾಗೃತಿ ಮೂಡಿಸಬೇಕಿದೆ.
ಚಿತ್ರವರದಿ : ನಂದೀಶ್ ಬಂಕೇನಹಳ್ಳಿ


