ಪ್ರತಿಯೊಬ್ಬ ಬೆಳೆಗಾರರು ತಮ್ಮ ತೋಟಕ್ಕೆ ಕಾರ್ಮಿಕ ವಿಮೆ (ಲೇಬರ್ ಇನ್ಸೂರೆನ್ಸ್ ) ಮಾಡಿಸುವ ಮೂಲಕ ಸಂಭವನೀಯ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಬೇಕು ಎಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು ಮನವಿ ಮಾಡಿದ್ದಾರೆ.
ಅವರು ಈ ಬಗ್ಗೆ ಪತ್ರಿಕೆಯ ಮೂಲಕ ಬೆಳೆಗಾರರಲ್ಲಿ ಮನವಿ ಮಾಡಿದ್ದು ; ಮಲೆನಾಡಿನ ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಮರಗಸಿ ಮಾಡುವಾಗ, ಅಡಿಕೆ, ಕಾಳುಮೆಣಸು ಕೊಯ್ಯುವಾಗ ಬಳಸುವ ಅಲ್ಯೂಮಿನಿಯಂ ಮತ್ತು ಕಬ್ಬಿಣದ ಏಣಿಗಳು ವಿದ್ಯುತ್ ತಂತಿಗೆ ತಾಗಿ, ಮರದಿಂದ ಬಿದ್ದು ತೋಟದ ಮಾಲೀಕರು ಮತ್ತು ಕಾರ್ಮಿಕರು ಸಾವನ್ನಪ್ಪುವ ಘಟನೆಗಳು ನಡೆಯುತ್ತಲೇ ಇದೆ. ನಮ್ಮ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಪ್ರತಿವರ್ಷ ಐದಾರು ಮಂದಿ ಇಂತಹ ಅವಘಡಗಳಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಮೊನ್ನೆ ತಾನೆ ಮೂಡಿಗೆರೆ ತಾಲ್ಲೂಕಿನ ತೋಟವೊಂದರಲ್ಲಿ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ಕಾರ್ಮಿಕನೋರ್ವ ತನ್ನ ಪ್ರಾಣ ಕಳೆದುಕೊಂಡಿದ್ದಾರೆ. ಕೊನೆಗೆ ತೋಟದ ಮಾಲೀಕರು ಕಾರ್ಮಿಕರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡಬೇಕಾಯಿತು.
ಇಂತಹ ಅವಘಡಗಳು ಸಂಭವಿಸಿದಾಗ ಕಾರ್ಮಿಕರು ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಂಡು ಅವರ ಕುಟುಂಬ ಅತಂತ್ರವಾಗುತ್ತದೆ.
ತೋಟದ ಮಾಲೀಕರು ತಮ್ಮ ತೋಟಕ್ಕೆ ಕಾರ್ಮಿಕ ವಿಮೆ ಮಾಡಿಸದೇ ಇದ್ದರೆ ತುಂಬಾ ನಷ್ಟವನ್ನು ಅನುಭವಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಕಾರ್ಮಿಕ ವಿಮೆ ಇಲ್ಲದೇ ಅವಘಡದಲ್ಲಿ ಗಾಯಗೊಂಡ ಕಾರ್ಮಿಕರ ಚಿಕಿತ್ಸೆಯ ವೆಚ್ಚ ಭರಿಸಬೇಕಾದ ಮತ್ತು ಒಂದು ವೇಳೆ ಕಾರ್ಮಿಕರು ಅಂಗವಿಕಲರಾದಾಗ ಅಥವಾ ಸಾವನ್ನಪ್ಪಿದಾಗ ಅವರ ಕುಟುಂಬಕ್ಕೆ ಲಕ್ಷಾಂತರ ಪರಿಹಾರವನ್ನು ಕೊಡಬೇಕಾದ ಮತ್ತು ನ್ಯಾಯಾಲಯಗಳಿಗೆ ಅಲೆಯಬೇಕಾದ ಸನ್ನಿವೇಶ ಎದುರಾಗುತ್ತಿದೆ.
ಈ ಬಗ್ಗೆ ಬೆಳೆಗಾರರ ಸಂಘ ಬಹಳಷ್ಟು ಬಾರಿ ಮನವಿ ಮಾಡಿದರು ಸಹ ಬೆಳೆಗಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಇಂತಹ ಅವಘಡ ಸಂಭವಿಸಿದಾಗ ಮಧ್ಯಸ್ಥಿಕೆಗಾಗಿ ಬೆಳೆಗಾರರ ಸಂಘದ ನೆರವು ಕೋರುತ್ತಾರೆ. ಇಂತಹ ಸನ್ನಿವೇಶದಲ್ಲಿ ಯಾರೂ ಸಹ ಆರ್ಥಿಕ ನಷ್ಟವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕಾರ್ಮಿಕ ವಿಮೆ ಇದ್ದರೆ ತೋಟದ ಮಾಲೀಕರು ಆರ್ಥಿಕ ನಷ್ಟದಿಂದ ಪಾರಾಗಬಹುದು.
ಈ ಹಿಂದೆ ಕಾರ್ಮಿಕ ವಿಮೆ ಮಾಡಿಸಲು ಅಧಿಕ ಪ್ರೀಮಿಯಂ ಕಟ್ಟಬೇಕಾಗುತ್ತಿತ್ತು. ಆದರೆ ಇತ್ತೀಚೆಗೆ ಅನೇಕ ವಿಮಾ ಕಂಪನಿಗಳು ಸ್ಪರ್ಧಾತ್ಮಕ ಬೆಲೆಯ ಪ್ರೀಮಿಯಂ ಮೂಲಕ ಕಾರ್ಮಿಕ ವಿಮೆಯನ್ನು ನೀಡುತ್ತಿವೆ. ಪ್ರತಿಯೊಬ್ಬ ಬೆಳೆಗಾರರು ಕಾರ್ಮಿಕ ವಿಮೆಯನ್ನು ಮಾಡಿಸಿದರೆ ಆರ್ಥಿಕ ನಷ್ಟದಿಂದ ಮತ್ತು ತೋಟದ ಕೆಲಸ ಮಾಡಿಸುವಾಗ ಮಾನಸಿಕ ಭಯದಿಂದ ಸುರಕ್ಷಿತವಾಗಿರಬಹುದು ಎಂದು ಬಾಲಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ವಿಮೆ ಬಗ್ಗೆ ಮಾಹಿತಿ ಮತ್ತು ವಿಮೆ ಮಾಡಿಸಲು ಆಸಕ್ತರು ಸಂಪರ್ಕಿಸಿ :
ದರ್ಪಣ ಡಿಜಿಟಲ್ ಸರ್ವೀಸ್ ಸೆಂಟರ್, ಕುಂದೂರು ಕಾಂಪ್ಲೆಕ್ಸ್, ಕೆ.ಎಂ.ರಸ್ತೆ, ಮೂಡಿಗೆರೆ ಮೊ : 8660601449



