ಕಳೆದ 6ವರ್ಷದಿಂದ ನಿಧಾನವಾಗಿ ಕಾಮಗಾರಿ ನಡೆಸಿ ಎರಡು ತಿಂಗಳ ಹಿಂದೆ ಕೆಲಸ ನಿಲ್ಲಿಸಿ ಕಾಲ್ಕಿತ್ತಿದ್ದ ಸೇತುವೆ ನಿರ್ಮಾಣದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಶುಕ್ರವಾರ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಮುಂದಿನ ವಿಧಾನಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡ ಬಳಿಕ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಂಗಳವಾರ ಸಭೆ ನಡೆಸಿ ಮತ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಗ್ರಾಮದಲ್ಲಿ ಹೇಮಾವತಿನದಿಗೆ ನಿರ್ಮಿಸುತ್ತಿರುವ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಕಳೆದ 6ವರ್ಷದಿಂದ ನಿಧಾನಗತಿಯಲ್ಲಿ ಸಾಗಿ ಕಳೆದ 2ತಿಂಗಳ ಹಿಂದೆ ಕಾಮಗಾರಿ ಮೋಟಕುಗೊಳಿಸಿ ಸ್ಥಳದಿಂದ ನಿರ್ಗಮಿಸಿದ್ದ ಗುತ್ತಿಗೆದಾರ ಮತ್ತು ಅಧಿಕಾರಿಗಳನ್ನು ಹಾಗೂ ಇತ್ತೀಚೆಗೆ ಪ್ರತಿಭಟನೆ ನಡೆಸಿ ಚುನಾವಣೆಗೆ ಬಹಿಷ್ಕಾರ ಹಾಕುವ ನಿರ್ಧಾರ ಕೈಗೊಂಡಿದ್ದ ಸ್ಥಳೀಯ ಮುಖಂಡರನ್ನು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ಕರೆಸಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ತು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸಭೆ ನಡೆಸಿ ಕೂಡಲೆ ಕಾಮಗಾರಿಗೆ ಚಾಲನೆ ನೀಡಬೇಕು ಈ ಮಳೆಗಾಲಕ್ಕೂ ಮುನ್ನ ಹೊಸ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಬೇಕು ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಬಳಿಕ ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಲಾಯಿತು.
ಕೆಆರ್ಡಿಸಿಎಲ್ ಹಾಸನ ವಿಭಾಗಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಚ್.ಎಲ್.ಮಂಜೇಶ್ ಮಾತನಾಡಿ ಹೊಸ ಸೇತುವೆ ನಿರ್ಮಿಸುತ್ತಿರುವ ಸ್ಥಳದ ಪಕ್ಕದಲ್ಲಿ ರೈತರ ಜಮೀನಿಗೆ ಹೋಗಲು ಮಿನಿಸೇತುವೆಯೊಂದನ್ನು ನಿರ್ಮಿಸಲಾಗಿದೆ. ಮುಖ್ಯರಸ್ತೆಯಿಂದ ಮಿನಿಸೇತುವೆಗೆ ಸಂಪರ್ಕ ಕಲ್ಪಿಸಲು ಹೊಸದಾಗಿ ರಸ್ತೆ ನಿರ್ಮಿಸಬೇಕು. ಅಲ್ಲಿ ಜಾಗದ ಕೊರತೆ ಇದೆ. ಹೊಸ ಸೇತುವೆ ಬಳಿ ನದಿ ಉಕ್ಕಿ ಹರಿಯುವಾಗ ರಸ್ತೆಯನ್ನು ಕೊರೆಯದಂತೆ ತಡೆಗೋಡೆ ನಿರ್ಮಾಣವಾಗಬೇಕು. ಅದರ ಅನುಮೋದನೆ ಸದ್ಯದಲ್ಲಿ ತಮ್ಮ ಕೈ ಸೇರಲಿದೆ. ಹೊಸ ಸೇತುವೆ ಬಳಿ ಮುಖ್ಯರಸ್ತೆ ನಿರ್ಮಾಣಕ್ಕೆ ಜಾಗ ಬೇಕಾಗಿದೆ. ಅದರ ಭೂ ಸ್ವಾದಿನ ಪ್ರತಿಕ್ರಿಯೆ ನಡೆಸಿದಾಗ ಓರ್ವ ಜಾಗದ ಮಾಲೀಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಜಾಗದಲ್ಲಿ ಕಾಮಗಾರಿ ನಡೆಸದಂತೆ ತಡೆಯೊದುತ್ತಿದ್ದಾರೆ. ಇನ್ನೆರಡು ದಿನದಲ್ಲಿ ನ್ಯಾಯಾಲಯಕ್ಕೆ ಅಫೀಡವಿಟ್ ಸಲ್ಲಿಸಲಾಗುವುದು. ಜಾಗದ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಅವರು ಸಹಕರ ನೀಡಿದರೆ ಕೂಡಲೆ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ತು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಸೇತುವೆ ನಿರ್ಮಾಣ ಕಾಮಗಾರಿಗೆ ಯಾವುದೆ ಅಡಚಣೆ ಇದ್ದರೆ ಜನಪ್ರತಿನಿಧಿಗಳಾದ ನಮ್ಮ ಅಥವಾ ಗ್ರಾಮಸ್ಥರ ಗಮನಕ್ಕೆ ತರಬೇಕಿತ್ತು 6ವರ್ಷ ಸುಮ್ಮನೆ ಕಾಲ ಕಳೆದ ಬಳಿಕ ಈಗ ಸಮಸ್ಯೆಗಳನ್ನು ಮುಂದಿರಿಸಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಪಲಾಯನ ಮಾಡಿದ್ದೀರಿ. ಹಳೆಯ ಸೇತುವೆಗೆ 114ವರ್ಷ ಪೂರ್ಣಗೊಂಡು ಸಂಪೂರ್ಣ ಶಿಥಿಲಗೊಂಡಿದೆ. ಅದು ಕುಸಿತಕ್ಕೊಳಗಾದರೆ ಆ ಭಾಗದ ಜನ ಎಲ್ಲಿ ತಿರುಗಾಡಬೇಕು. ಕೂಡಲೆ ಕಾಮಗಾರಿ ಆರಂಭಿಸಿ ತ್ವರಿತಗತಿಯಲ್ಲಿ ಮುಗಿಸಬೇಕು. ಮತ್ತೆ ಮೀನಾಮೇಷ ಎಣಿಸಿದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಇಂಜಿನಿಯರ್ ಅವರನ್ನು ಅಮಾನತ್ತು ಪಡಿಸಲಾಗುವುದು ಎಂದು ಎಚ್ಚರಿಸಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಮಲೆನಾಡಿನ ಜನ ಸೌಮ್ಯ ಸ್ವಭಾವದವರು 6ವರ್ಷ ನಿಧಾನವಾಗಿ ಕಾಮಗಾರಿ ನಡೆಸಿದಾಗಲು ಮಾತನಾಡದೆ ಸುಮ್ಮನಾಗಿದ್ದಾರೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಪಲಾಯನ ಮಾಡಿದ ನಂತರ ವಿಧಿಯಿಲ್ಲದೆ ಅನಿವಾರ್ಯವಾಗಿ ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ಚುನಾವಣೆ ಬಹಿಷ್ಕಾರದಂತಹ ಕಠಿಣ ನಿರ್ಧಾರವನ್ನು ಕೈಗೊಂಡಿದ್ದಾರೆ. ಕಳೆದ ವರ್ಷ ಮಳೆಗಾಲದಲ್ಲಿ ಹಳೆಯ ಸೇತುವೆ ಕುಸಿದಿತ್ತು. ಅದನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ಈ ವರ್ಷದ ಮಳೆಗಾಲದಲ್ಲಿ ಹಳೆ ಸೇತುವೆ ಮತ್ತೆ ಕುಸಿಯುವ ಭೀತಿಯಿದೆ. ಹಾಗಾಗಿಬಿಟ್ಟರೆ ಮೂಡಿಗೆರೆ ಸಕಲೇಶಪುರ ಸಂಚಾರವೆ ಸ್ತಬ್ಧಗೊಳ್ಳಲಿದೆ. 2016ರಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ರಾಜ್ಯ ಹೆದ್ದಾರಿಯಲ್ಲಿ ಒಂದು ಸೇತುವೆ ನಿರ್ಮಾಣಕ್ಕೆ 6ವರ್ಷ ಬೇಕಾಗಿತ್ತಾ. ಮತ್ತೆ ಜನ ರೊಚ್ಚಿಗೇಳುವ ಮುನ್ನ ಕಾಮಗಾರಿ ಮುಗಿಸಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿದ್ದ ಜಾಗದ ಮಾಲೀಕ ಸುರೇಂದ್ರ ಅವರ ಜಾಗಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ ಕಾಮಗಾರಿಗೆ ಅಡ್ಡಿಪಡಿಸದಂತೆ ಮನವೊಲಿಸಲಾಯಿತು. ಅದಕ್ಕೆ ಜಾಗದ ಮಾಲೀಕರು ಒಪ್ಪಿಗೆ ಸೂಚಿಸಿದರು. ಬುಧವಾರದಿಂದಲೆ ಕಾಮಗಾರಿ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕಳೆದ ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದ ಮುಖಂಡರಾದ ಯು.ಎನ್. ಚಂದ್ರೇಗೌಡ, ಕಿರುಗುಂದ ಅಬ್ಬಾಸ್, ರಾಜಶೇಖರ್, ಎಂ.ಸಿ.ಆದರ್ಶ, ಗುತ್ತಿಗೆದಾರ ನರಸಿಂಹ ಇತರರಿದ್ದರು.



