ಮೂಡಿಗೆರೆ ಪಟ್ಟಣಕ್ಕೆ ನೀರು ಸರಬರಾಜು ಆಗುವ ಸುಂಡೆಕೆರೆ ಹಳ್ಳ ಸಂಪೂರ್ಣ ಕಲುಷಿತಗೊಂಡಿದ್ದು, ಈ ಹಿನ್ನಲೆಯಲ್ಲಿ ಸಚೇತನ ಯುವ ಸಂಘದ ನೇತೃತ್ವದಲ್ಲಿ ಮಂಗಳವಾರ ಸುಂಡೆಕೆರೆ ಹಳ್ಳವನ್ನು ಸ್ವಚ್ಛಗೊಳಿಸಲಾಯಿತು.
ಸಚೇತನ ಯುವ ಸಂಘದ ಅಧ್ಯಕ್ಷ ರವಿ ಮಾತನಾಡಿ, ಸುಂಡೆಕರೆ ಹಳ್ಳದಲ್ಲಿ ಮದ್ಯಪಾನ ಮಾಡಿ ಬಾಟಲಿಗಳನ್ನು ಎಸೆದಿದ್ದಾರೆ. ಅಲ್ಲದೇ ಇಲ್ಲಿ ತಿರುಗಾಡುವ ವಾಹನದಲ್ಲಿ ತ್ಯಾಜ್ಯ ವಸ್ತು ತಂದು ಹಳ್ಳಕ್ಕೆ ಎಸೆಯುವುದರಿಂದ ಹಳ್ಳ ಸಂಪೂರ್ಣ ಕಲುಷಿತಗೊಳ್ಳುತ್ತಲೇ ಇರುತ್ತದೆ. ನಾವು ಹಳ್ಳದಲ್ಲಿರುವ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಯಾರೋ ವಾಹನದಲ್ಲಿ ಬಂದು ಕಸವನ್ನು ಹಳ್ಳಕ್ಕೆ ಬಿಸಾಡಿದ್ದಾರೆ. ಇಂತಹ ಘಟನೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಪಟ್ಟಣ ಪಂಚಾಯಿತಿ ಕಡಿವಾಣ ಹಾಕಲು ಮುಂದಾಗಬೇಕೆಂದು ಆಗ್ರಹಿಸಿದರು.
ಸ್ವಚ್ಛತಾ ಕಾರ್ಯ ಮಾಡಲು ಪ.ಪಂ.ಯಲ್ಲಿ ಪೌರ ಕಾರ್ಮಿಕರಿದ್ದಾರೆ. ಆದರೆ ಪ್ರತಿನಿತ್ಯ ಇಡೀ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಇದೊಂದು ಹೊರೆಯಾಗಬಾರದೆಂಬ ದೃಷ್ಟಿಯಿಂದ ಪ್ರತಿ ವರ್ಷ ನಮ್ಮ ಸಂಘದಿಂದ ಸುಂಡೆಕೆರೆ ಹಳ್ಳ ಉಳಿಸಿ ಎಂಬ ಅಭಿಯಾನದ ಮೂಲಕ ಸ್ವಚ್ಛತೆ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಪ.ಪಂ. ಕೂಡ ಸಂಪೂರ್ಣ ಸಹಕಾರ ನೀಡಿದೆ ಎಂದು ಹೇಳಿದರು.
ಸಂಘದ ಮುಖಂಡರಾದ ಟಿ.ಹರೀಶ್, ನಿಶ್ಚಲ್, ಮಂಜು ಪಟೇಲ್, ದಿನೇಶ್, ಪಾಪಕ್ಕ, ಗೀತಾ, ವೆಂಕಟೇಶ್ ಉದುಸೆ, ಪುಣ್ಯಮೂರ್ತಿ, ಮಂಜುನಾಥ್ ಮತ್ತಿತರರಿದ್ದರು.





