ಗ್ರಾಮಾಯಣ ಕೃತಿಯಲ್ಲಿ ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ. ಮಲೆನಾಡಿನ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಈ ಕೃತಿಯಲ್ಲಿ ದಾಖಲಾಗಿದೆ ಎಂದು ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಡಾ.ಭದ್ರಪ್ಪ ಹೇಳಿದರು.
ಭಾನುವಾರ ಬಿದರಹಳ್ಳಿಯಲ್ಲಿ ನಡೆದ ಲೇಖಕ ಧನಂಜಯ ಜೀವಾಳ ಅವರ ಗ್ರಾಮಾಯಣ ಭಾಗ 1 ಮತ್ತು 2 ಪುಸ್ತಕ ಹಾಗೂ ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ ಎಂಬ ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವಾನುಭವದ ಸಹಜವಾದ ಸ್ಪಂದನ ಈ ಕೃತಿಯಲ್ಲಿ ಅಕ್ಷರಗಳಾಗಿವೆ. ಮೂರ್ನಾಲ್ಕು ಕಾದಂಬರಿಗಳಿಗಾಗುವಷ್ಟು ವಸ್ತು ವಿಷಯಗಳು ಈ ಕೃತಿಯಲ್ಲಿವೆ. ಗತಿಸಿ ಹೋದ ಮಲೆನಾಡಿನ ಜನಜೀವನ ಸಂಸ್ಕøತಿಯನ್ನು ದಾಖಲಿಸುವ ಕಾರ್ಯ ಅತ್ಯಂತ ಅಗತ್ಯವಾಗಿ ಆಗಬೇಕಿದೆ. ಆಯಾ ಭಾಗದ ಪ್ರಾದೇಶಿಕ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಲೇಖಕರು ಹಾಗೂ ವಿಮರ್ಶಕರಾದ ಡಾ.ಎಚ್.ಎಸ್. ಸತ್ಯನಾರಾಯಣ ಮಾತನಾಡಿ, ಧನಂಜಯ ಜೀವಾಳ ಅವರು ಗ್ರಾಮಾಯಣ ಕೃತಿಯ ಮೂಲಕ ಮಲೆನಾಡಿನ ಹಿನ್ನಲೆಯ ಗ್ರಾಮ ಭಾರತವನ್ನು ಕಟ್ಟಿಕೊಟ್ಟಿದ್ದಾರೆ. ಗ್ರಾಮ ಸಂಸ್ಕøತಿಯ ವಿವರಗಳು ಈ ಕೃತಿಯಲ್ಲಿ ದಟ್ಟವಾಗಿದೆ. ಎಚ್ಚರದ ಕಣ್ಣಿಗೆ ಕಾಣಬಹುದಾದ ಅನೇಕ ಸೂಕ್ಷ್ಮ ಸಂಗತಿಗಳನ್ನು ಈ ಕೃತಿ ಕಲೆ ಹಾಕಿದೆ. ಮನುಷ್ಯನ ವರ್ತನೆ, ಅನುಕೂಲಸಿಂಧು ಪ್ರವೃತ್ತಿ, ಉಡಾಫೆ, ಸ್ಥಳೀಯ ರಾಜಕಾರಣದ ಹೊರಚಾಚುಗಳು ಮುಂತಾದವುಗಳ ಸಮೇತ ತಳುಕು ಹಾಕಿಕೊಂಡ ಮಲೆನಾಡಿನ ಸಂಸ್ಕøತಿಯ ಅಪೂರ್ವ ಚಿತ್ರವೊಂದನ್ನು ಧನಂಜಯ ಜೀವಾಳರ ಸಮಾಜೋ-ಸಾಂಸ್ಕøತಿಕ ನಿಲುವಿನ ಲೇಖನಿ ಇಲ್ಲಿ ರೇಖಿಸುತ್ತಾ ಸಾಗಿದೆ. ಇದು ಅವರು ಕಂಡ ಗ್ರಾಮಾಯಣ ಮಾತ್ರವಲ್ಲ, ಗ್ರಾಮಭಾರತದ ಚಿತ್ರವೂ ಹೌದು. ತನ್ನ ಸುತ್ತಲಿನ ವಿದ್ಯಮಾನಗಳನ್ನು ಅದರೆಲ್ಲಾ ಸೂಕ್ಷ್ಮತೆಗಳಿಂದ ಗಮನಿಸಿ, ನವಿರು ಹಾಸ್ಯ ಮತ್ತು ವಿಡಂಬನೆಯೊಂದಿಗೆ ಓದುಗರೆದುರು ಮಂಡಿಸುವ ಲವಲವಿಕೆಯ ಶೈಲಿಯು ಧನಂಜಯ ಜೀವಾಳರಿಗೆ ಸರಾಗವಾಗಿ ಒಲಿದೆ. ಇಲ್ಲಿನ ಬರಹಕ್ಕೊಂದು ಆಪ್ತವಾದ ಗುಣವಿದೆ. ಇದು ಈ ಕೃತಿಯ ಸರಾಗ ಓದಿಗೆ ಪೂರಕವಾಗಿ ದುಡಿದಿದೆ. ಪ್ರಕಾರಗಳ ಹಂಗಿಲ್ಲದ ಈ ಕೃತಿಯಲ್ಲಿ ಕತೆ ಬೇಕೆನ್ನುವವರಿಗೆ ಕತೆಯಿದೆ, ಪ್ರಬಂಧ, ನಾಟಕ ಬೇಕೆನ್ನುವವರಿಗೆ ಅವೂ ಲಭ್ಯವಾಗುತ್ತವೆ. ಏಕ ಸೂತ್ರತೆಯ ಹಂಗಿಲ್ಲದೆ, ಹರಿಯುವ ನೀರಿನಂತೆ ಮಲೆನಡಿನ ಹಲವು ಆಯಾಮಗಳನ್ನು ಅದರೆಲ್ಲ ವಿವರಗಳೊಂದಿಗೆ ಕಾಣಿಸಬಲ್ಲ ಇಲ್ಲಿನ ವಿವರಗಳನ್ನು ಓದುವಾಗ ಅವೆಲ್ಲವೂ ನಮ್ಮ ಕಣ್ಣಮುಂದೆ ನಡೆಯುತ್ತಿದೆಯೇನೋ ಎಂಬ ಭಾವನೆ ಆವರಿಸುವಷ್ಟು ಗಟ್ಟಿತನದಿಂದ ಕೂಡಿದ ಯಶಸ್ವಿ ಬರಹವಿದು. ಮಲೆನಾಡಿನ ಜನರ ಚರ್ಯೆ, ಆಹಾರ, ಉಡುಗೆತೊಡುಗೆಗಳು, ಶಿಕಾರಿಯ ಬಗೆ, ಕಾಫಿ ಬೆಳೆ, ಚಿತ್ರಕಲೆ, ಫೋಟೋಗ್ರಫಿ, ಸಂತೆ, ವ್ಯಾಪಾರ, ವ್ಯವಹಾರ, ಜಾಣತನ, ಪೆದ್ದತನ, ಸೋಗಲಾಡಿತನ ಎಲ್ಲವೂ ಚಿತ್ರವಿಚಿತ್ರವಾಗಿ ಮೇಳೈಸಿರುವ ಈ ಕೃತಿಯು ಸ್ಥಳೀಯ ವಿದ್ಯಮಾನಗಳನ್ನು ಕಾಲದ ಚಲನೆಯೊಂದಿಗೆ ಸಮೀಕರಿಸಿ, ಅಪೂರ್ವ ದಾಖಲೆಯೆಂಬಂತೆ ಕಾಣಿಸಿರುವುದು ಮುಖ್ಯ. ಇಂತಹ ದೇಸಿ ನುಡಿಗಟ್ಟು ಮತ್ತು ಸಂಸ್ಕೃತಿಯ ಚಹರೆಗಳನ್ನು ಹಿಡಿದಿಡುವಲ್ಲಿ, ಸಾಹಿತ್ಯಕ ಪರಿಭಾಷೆಯ ಮುಖೇನ ದಾಖಲಿಸುವಲ್ಲಿ ನಮ್ಮ ಹೊಸ ತಲೆಮಾರು ಆಸಕ್ತವಾಗಿರುವುದು ನಿಜಕ್ಕೂ ಸ್ವಾಗತಾರ್ಹವಾದ ಕೆಲಸ. ಈ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸಬಗೆಯ ಸಂವೇದನೆಯನ್ನು ಪ್ರಾಪ್ತವಾಗಿಸುವಲ್ಲಿ ಧನಂಜಯ ಜೀವಾಳವರು ತಮ್ಮೆಲ್ಲಾ ಲೋಕಾನುಭವವನ್ನು ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಾರೆಂಬುದು ಅಭಿನಂದನಾರ್ಹವಾದ ಸಂಗತಿ. ಇದೊಂದು ಸಫಲವಾದ ಬರಹಗಳ ಸಂಕಲನ ಎಂದರು.
ಲೇಖಕರು ಹಾಗೂ ಸಂಶೋದಕರಾದ ಪ್ರದೀಪ್ ಕೆಂಜಿಗೆ ಮಾತನಾಡಿ ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಬೇಕಿದೆ. ಆಡಿಯೋ ಪುಸ್ತಕಗಳು ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಆಡಿಯೋ ಪುಸ್ತಕಗಳು ಕೂಡ ಪರಿಣಾಮಕಾರಿಯಾಗಿ ಕೇಳುವ ವರ್ಗವನ್ನು ತಲುಪುತ್ತವೆ ಎಂದರು.
ಹಿರಿಯ ಜಾನಪದ ತಜ್ಞರಾದ ಕಾಳೇಗೌಡ ನಾಗವಾರ ಮಾತನಾಡಿದರು.
ಧನಂಜಯ ಜೀವಾಳ ಅವರ ಗ್ರಾಮಾಯಣ-1 ಮತ್ತು ಗ್ರಾಮಾಯಣ-2 ಕೃತಿಗಳು ಲೋಕಾರ್ಪಣೆಗೊಂಡಿವೆ.
ಧನಂಜಯ ಅವರ ನೂರಾರು ಅಭಿಮಾನಿಗಳು, ಸಾಹಿತ್ಯ ಆಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



