ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ಪಿ ಪಕ್ಷ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು. ನಾವು ಯಾವುದೇ ಪಕ್ಷದ ಜತೆಗೆ ಒಳ ಒಪ್ಪಂದವಾಗಲಿ, ಹೊಂದಾಣಿಕೆ ಮಾಡಿಕೊಳ್ಳುವುದಾಗಲಿ ಮಾಡಿಲ್ಲವೆಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ದುರಾಡಳಿತದಿಂದ ಬೇಸತ್ತಿದ್ದ ಜನರು ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ದೃಷ್ಟಿಯಿಂದ ಗೆಲುವು ಸಾಧಿಸುವ ಪಕ್ಷಕ್ಕೆ ರಾಜ್ಯಾಧ್ಯಂತ ಜನರು ಬೆಂಬಲಿಸಿದ್ದಾರೆ. ಅದೇ ರೀತಿಯಲ್ಲಿ ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲೂ ನಡೆದಿದೆ. ಈ ಕಾರಣದಿಂದ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ಪಿ ಪಕ್ಷ ಕಡಿಮೆ ಮತಗಳನ್ನು ಪಡೆದಿದೆ. ಇದರಿಂದ ವಿರೋಧ ಪಕ್ಷದವರು ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವು ಕೊನೆಯವರೆಗೂ ನಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಶತಾಯಗತಾಯ ಕೆಲಸ ಮಾಡಿದ್ದೇವೆ. ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬಿಎಸ್‍ಪಿ ಜಿಲ್ಲಾ ಸಂಯೋಜಕ ಯು.ಬಿ.ಮಂಜಯ್ಯ ಮಾತನಾಡಿ, ಜನರ ತೀರ್ಮಾನ ನಾವು ಸ್ವೀಕರಿಸುತ್ತೇವೆ. ಕ್ಷೇತ್ರದಲ್ಲಿ ಬೆಟ್ಟಗೆರೆ, ತ್ರಿಪುರ, ಗೋಣಿಬೀಡು, ಆಲ್ದೂರು ಸೇರಿದಂತೆ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಬೆಂಬಲಿತ ಚುನಾಯಿತ ಸದಸ್ಯರಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್‍ನವರು ಬಿಎಸ್‍ಪಿ ಮತ ಎಲ್ಲೆಲ್ಲಿ ಅಧಿಕವಿದೆ ಎಂಬ ಮಾಹಿತಿ ಪಡೆದು ಹಣ ಹಾಗೂ ಗ್ಯಾರಂಟಿ ಕಾರ್ಡ್ ಆಮಿಷವೊಡ್ಡಿ ಮತದಾರರ ಓಲೈಕೆ ಮಾಡಿದ್ದಾರೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಯಾವ ಆಮಿಷಕ್ಕೂ ಬಲಿಯಾಗಿಲ್ಲ. ಮುಂಬರುವ ಜಿಪಂ, ಮತ್ತು ತಾಪಂ ಚುನಾವಣೆಯಲ್ಲಿ ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತೇವೆ. ಇನ್ನು ಮುಂದೆ ಯಾವುದೇ ಅಪ ಪ್ರಚಾರ ನಡೆಸಿದರೆ ಅಂತವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಎಸ್‍ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಮುಖಂಡರಾದ ಪಿ.ಕೆ.ಮಂಜುನಾಥ್, ಬಕ್ಕಿ ಮಂಜು ಉಪಸ್ಥಿತರಿದ್ದರು.



