ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸರ್ಕಾರವು ತನ್ನ ಮೊದಲ ಅದಿವೇಶನದಲ್ಲಿಯೇ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ಅದಿನಿಯಮ 1978ಕ್ಕೆ ತಿದ್ದುಪಡಿ ವಿದೇಯಕ ಮಂಡಿಸಿ ಅನುಮೋದನೆ ಪಡೆದು ಜಾರಿಗೆ ತಂದಿರುವುದು ಅತ್ಯಂತ ಸ್ವಾಗತಾರ್ಹ ಕ್ರಮ ಎಂದು ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡಿ ಇದೊಂದು ಐತಿಹಾಸಿ ತಿದ್ದುಪಡಿಯಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಮಂದಿ ದಲಿತರು ಕಳೆದುಕೊಂಡಿರುವ ಭೂಮಿಯನ್ನು ಮರಳಿ ಪಡೆಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದಿದ್ದಾರೆ.
ಈ ಕಾಯ್ದೆಯನ್ನು ಹಿಂದಿನ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ತರಬೇಕು ಎಂದು ನಾನು ಎಸ್ಸಿ ಎಸ್ಟಿ ಅಭಿವೃದ್ಧಿ ನಿಗಮ ಅಧ್ಯಕ್ಷನಾಗಿದ್ದಾಗ ಒತ್ತಾಯಿಸಿದ್ದೆ. ಅದನ್ನು ಅಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಬಜೆಟ್ ಭಾಷಣದಲ್ಲಿಯೂ ಸೇರಿಸಿದ್ದರು. ಆದರೆ ಕಾನೂನು ಸಚಿವ ಮಾಧುಸ್ವಾಮಿಯವರ ವಿರೋಧದಿಂದಾಗಿ ಇದು ಕಾಯ್ದೆಯಾಗಲಿಲ್ಲ.
ಆದರೆ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಚಿವ ಕೃಷ್ಣಭೈರೇಗೌಡರ ಜನಪರ ಕಾಳಜಿಯಿಂದಾಗಿ ಅದು ಮೊದಲ ಅಧಿವೇಶನದಲ್ಲಿಯೇ ಕಾಯ್ದೆಯಾಗಿ ರೂಪುಗೊಂಡಿದೆ ಎಂದರು.
ಪರಿಶಿಷ್ಟರ ಜಾತಿ ಮತ್ತು ಪಂಗಡದವರಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ಪರಭಾರೆ ಮಾಡಬೇಕು ಎಂದರೆ ಅದಕ್ಕೆ ಕೆಲವೊಂದು ನಿಯಮವಿದೆ. ಭೂಮಿಯನ್ನು ಖರೀದಿಸುವವರು ಭೂಮಿಯನ್ನು ಮಾರಾಟ ಮಾಡುವ ದಲಿತ ವ್ಯಕ್ತಿಗೆ ಪರ್ಯಾಯ ಭೂಮಿಯನ್ನು ನೀಡಬೇಕು ಜೊತೆಗೆ ಭೂಮಿ ಮಾರಾಟಕ್ಕೆ ಸರ್ಕಾರದ ಅನುಮತಿ ಪಡೆಯಬೇಕು. ಆಗ ಮಾತ್ರ ಅದು ಕಾನೂನುಬದ್ಧವಾಗುತ್ತದೆ.
ಆದರೆ ಅನೇಕ ಪ್ರಕರಣಗಳಲ್ಲಿ ದಲಿತರಿಗೆ ಮಂಜೂರಾದ ಭೂಮಿಯನ್ನು ಬ್ಯಾಂಕ್ ಹರಾಜು ಸೇರಿದಂತೆ ವಾಮಮಾರ್ಗಗಳನ್ನು ಅನುಸರಿಸಿ ಸರ್ಕಾರದ ಅನುಮತಿ ಪಡೆಯದೇ ಕಡಿಮೆ ಬೆಲೆಗೆ ದಲಿತರ ಭೂಮಿಯನ್ನು ಬಲಿಷ್ಠರು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದೀಗ ಈ ಕಾಯ್ದೆಯಿಂದ ಈ ರೀತಿ ಭೂಮಿಯನ್ನು ಕಳೆದುಕೊಂಡವರು ಅಥವಾ ಅವರ ವಾರಸುದಾರರು ಮೇಲ್ಮನವಿ ಸಲ್ಲಿಸಿ ಪುನಃ ತಮ್ಮ ವಶಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೇಲ್ಮನವಿ ಸಲ್ಲಿಸಲು ಯಾವುದೇ ಕಾಲಮಿತಿ ಇರುವುದಿಲ್ಲ. ಇದರಿಂದ ಅನ್ಯಾಯಕ್ಕೊಳಗಾದ ದಲಿತರಿಗೆ ನ್ಯಾಯ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದೆ. ಅವರು ರಾಜ್ಯದ ದಲಿತರ ಪಾಲಿಗೆ ಎರಡನೇ ಅಂಬೇಡ್ಕರ್ ಆಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



