ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣಗಳನ್ನು ತನಿಖೆ ನಡೆಸಲು ಕರ್ನಾಟಕ ಸರ್ಕಾರ ತಹಸೀಲ್ದಾರ್ ಗಳ ವಿಶೇಷ ತಂಡವನ್ನು ರಚಿಸಿ ನಿಯೋಜನೆ ಮಾಡಿದೆ.
ಕಡೂರು ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ಫಾರಂ ನಂಬರ್ 50 ಮತ್ತು 53ರಲ್ಲಿ ನಿಯಮ ಮೀರಿ ಭಾರೀ ಪ್ರಮಾಣದಲ್ಲಿ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿಕೊಡಲಾಗಿದೆ ಎಂಬ ದೂರುಗಳು ಬಂದಿದ್ದವು.
ಕಡೂರು ತಾಲ್ಲೂಕಿನಲ್ಲಿ ಸುಮಾರು 2 ಸಾವಿರ ಎಕರೆಯಷ್ಟು ಗೋಮಾಳ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಕೊಡಲಾಗಿದೆ. ಅನೇಕ ಮಂದಿ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಅಕ್ರಮವಾಗಿ ಭೂಮಂಜೂರು ಮಾಡಿಕೊಡಲಾಗಿದೆ ಎಂದು ದೂರುಗಳು ಕೇಳಿಬಂದಿದ್ದವು.
ಹಾಗೆಯೇ ಮೂಡಿಗೆರೆ ತಾಲ್ಲೂಕಿನಲ್ಲಿ ಈಗ್ಗೆ ಎರಡು ಮೂರು ವರ್ಷಗಳಲ್ಲಿ ನೂರಾರು ಮಂದಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿಕೊಡಲಾಗಿದೆ. ಯಾವುದೇ ನಿಯಮಗಳನ್ನು ಪಾಲಿಸದೇ, ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಡಿಸದೇ ಬೇಕಾಬಿಟ್ಟಿಯಾಗಿ ಭೂಮಿ ಮಂಜೂರು ಮಾಡಿಕೊಡಲಾಗಿದೆ ಎಂದು ದೂರುಗಳು ಕೇಳಿಬಂದಿದ್ದವು. ಕೆಲವು ಹೊರಗಿನ ವ್ಯಕ್ತಿಗಳಿಗೂ ಭೂಮಿ ಮಂಜೂರು ಮಾಡಿಕೊಡಲಾಗಿದೆ. ಒಂದೇ ಕುಟುಂಬದ ಅನೇಕ ಮಂದಿಗೆ ಭೂಮಿ ಮಂಜೂರು ಮಾಡಲಾಗಿದೆ. ಹೀಗೆ ಬಹಳಷ್ಟು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಈಗಾಗಲೇ ಉಪವಿಭಾಗಾಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ.


ಆದರೆ ಬಹಳಷ್ಟು ಕಡತಗಳು ತನಿಖೆಗೆ ಬಾಕಿ ಇರುವುದರಿಂದ ಸರ್ಕಾರ ಪ್ರಕರಣಗಳ ತನಿಖೆಗೆ 15 ಅಧಿಕಾರಿಗಳ ವಿಶೇಷ ತನಿಖೆಗೆ ನಿಯೋಜನೆ ಮಾಡಿದೆ.
ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಅವರು ಅಕ್ರಮವಾಗಿ ಭೂ ಮಂಜೂರಾತಿ ಆಗಿರುವ ಅಂಶವನ್ನು ಪ್ರಸ್ತಾಪಿಸಿದ್ದರು.
ತನಿಖೆಗೆ ರಚನೆ ಮಾಡಲಾದ ತಂಡದಲ್ಲಿ ತಹಶೀಲ್ದಾರ್ ಗ್ರೇಡ್ 1 ಮತ್ತು ಗ್ರೇಡ್ 2 ಶ್ರೇಣಿಯ ಒಟ್ಟು 15 ಅಧಿಕಾರಿಗಳನ್ನು ನಿಯೋಜಿಸಿದ್ದು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕಾಗಿದೆ. ನಿಯೋಜಿತ ಅಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳ ಬಳಿ ಕರ್ತವ್ಯಕ್ಕೆ ಹಾಜರಾಗಿ ತನಿಖಾ ವರದಿ ನೀಡುವವರೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದರಿಂದಾಗಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿಕೊಟ್ಟಿರುವ ಅಧಿಕಾರಿಗಳು, ನೌಕರರಿಗೆ ಹಾಗೆಯೇ ಹಣವನ್ನು ಕೊಟ್ಟು ಭೂಮಿ ಮಂಜೂರು ಮಾಡಿಸಿಕೊಂಡಿರುವ ರೈತರಿಗೆ ಆತಂಕ ಶುರುವಾಗಿದೆ.



