ಮೂಡಿಗೆರೆ ಪಟ್ಟಣದ ಕೆ.ಎಂ.ರಸ್ತೆಯಲ್ಲಿ ರಸ್ತೆಯ ಬದಿಯಲ್ಲಿ ಉಂಟಾಗಿದ್ದ ದೊಡ್ಡ ದೊಡ್ಡ ಗುಂಡಿಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ವತಃ ಶ್ರಮದಾನದ ಮೂಲಕ ಮುಚ್ಚಿದ್ದಾರೆ.
ಕೆ.ಎಂ. ರಸ್ತೆಯ ಉದ್ದಕ್ಕೂ ರಸ್ತೆಯಂಚಿಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದವು. ಇದರಿಂದ ಸಾರ್ವಜನಿಕರಿಗೆ ವಾಹನಗಳನ್ನು ಪಾರ್ಕ್ ಮಾಡಲು ಮತ್ತೊಂದು ವಾಹನಕ್ಕೆ ಸೈಡ್ ನೀಡಲು ತುಂಬಾ ಕಷ್ಟವಾಗುತ್ತಿತ್ತು. ಇದರ ಬಗ್ಗೆ ಸಂಬಂಧಿಸಿದ ಇಲಾಖೆಗಳು ಮುತುವರ್ಜಿ ವಹಿಸಿರಲಿಲ್ಲ. ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಅವರೆ ರಿಪೇರಿ ಮಾಡಬೇಕು ಎಂದು ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರು. ಸ್ಥಳೀಯ ಪಟ್ಟಣ ಪಂಚಾಯಿತಿ ಕೂಡ ಇದರ ಬಗ್ಗೆ ಕ್ರಮ ವಹಿಸಿರಲಿಲ್ಲ.

ಇದೀಗ ಈ ರಸ್ತೆಯ ಅವ್ಯವಸ್ಥೆಯನ್ನು ನೋಡಲಾಗದೇ ಮೂಡಿಗೆರೆ ಠಾಣೆಯ ಪೊಲೀಸರು ಸ್ವತಃ ತಾವೇ ಕಾರ್ಯಾಚರಣೆಗೆ ಇಳಿದಿದ್ದರು. ಹಳೆಯ ಕಟ್ಟಡವೊಂದರಿಂದ ಸಿಕ್ಕಿದ ಕಲ್ಲು ಮತ್ತು ಕಾಂಕ್ರಿಟ್ ಮಿಶ್ರಣವನ್ನು ಟಿಪ್ಪರ್ ಗಳಲ್ಲಿ ತಂದು ಹಾಕಿಸಿದ ನಂತರ ಸ್ವತಃ ತಾವೇ ಹಾರೆ ಹಿಡಿದು ಸಮತಟ್ಟು ಮಾಡಿದರು. ಕೆಲವು ಕಡೆ ಪೊಲೀಸರ ಕಾರ್ಯದಿಂದ ಸ್ಪೂರ್ತಿಗೊಂಡು ಕೆಲ ಅಂಗಡಿ ಮಾಲೀಕರು ಪೊಲೀಸರೊಂದಿಗೆ ಕೈಜೋಡಿಸಿದರು.

ಮೂಡಿಗೆರೆ ಠಾಣೆಯ ಠಾಣಾಧಿಕಾರಿ ಆದರ್ಶ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಅವರು ಪ್ರೋತ್ಸಾಹ ನೀಡಿದ್ದರು.
ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬಂದಿದೆ.
ಇತ್ತೀಚೆಗೆ ಆಲ್ದೂರು ಠಾಣಾ ಪೊಲೀಸರು ರಸ್ತೆ ಗುಂಡಿಗಳನ್ನು ಮುಚ್ಚಿ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದರು. ಇವತ್ತು ಮೂಡಿಗೆರೆ ಪೊಲೀಸರು ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.
ಪೊಲೀಸರು ತಾವೂ ಕೇವಲ ಕಾನೂನು ರಕ್ಷಣೆ ಮಾಡುವುದು ಮಾತ್ರವಲ್ಲ. ಸಾರ್ವಜನಿಕ ಸೇವೆಯನ್ನು ಹೀಗೂ ಮಾಡುತ್ತೇವೆ ಎಂದು ತಮ್ಮ ಕಾರ್ಯದ ಮೂಲಕ ನಿರೂಪಿಸಿದರು.
ಪೊಲೀಸರ ಈ ಕಳಕಳಿಯಿಂದ ಸದ್ಯಕ್ಕೆ ಮೂಡಿಗೆರೆ ಕೆ.ಎಂ. ರಸ್ತೆಯಲ್ಲಿ ವಾಹನ ಸವಾರರಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.




