ಆಲ್ದೂರು ಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಕಾಡಾನೆಗಳ ಗುಂಪೊಂದು ನಿರಂತರ ಹಾವಳಿ ನಡೆಸುತ್ತಿದೆ. ಹಾಗೆಯೇ ವ್ಯಕ್ತಿಯೊಬ್ಬರ ಜೀವಹಾನಿಗೂ ಕಾರಣವಾಗಿದೆ. ಕಾಡಾನೆ ಹಾವಳಿ ಖಂಡಿಸಿ ಇಂದು ಆಲ್ದೂರು ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ರೈತ ಸಂಘ ಮತ್ತು ಬೆಳೆಗಾರರ ಸಂಘಟನೆಗಳು ಮತ್ತು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಆಲ್ದೂರು ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆಗಳನ್ನು ಅರಣ್ಯ ಇಲಾಖೆ ಅಟ್ಟುವ ಕೆಲಸ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಆನೆಗಳ ಗುಂಪು ಒಂದು ಊರಿನಿಂದ ಮತ್ತೊಂದು ಊರಿಗೆ ಸುತ್ತು ಹೊಡೆಯುತ್ತಿವೆ. ಇದರಿಂದ ಇಡೀ ಹೋಬಳಿಯ ಜನರು ಆತಂಕದಿಂದ ಜೀವನ ನಡೆಸುವಂತಾಗಿದೆ. ಕಾಡಾನೆಗಳ ತಂಡ ರೈತರ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಬೆಳೆಹಾನಿ ಉಂಟುಮಾಡುತ್ತಿವೆ. ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತೋಟಗಳನ್ನು ಪಾಳುಬಿಡುವ ಪರಿಸ್ಥಿತಿ ಬಂದಿದೆ. ಜನರು ಹಗಲು ಹೊತ್ತೇ ಹೊರಗಡೆ ತಿರುಗಾಡಲು ಭಯಪಡುವಂತಾಗಿದೆ. ಇತ್ತೀಚೆಗೆ ಕಂಚಿನಕಲ್ಲು ದುರ್ಗದಲ್ಲಿ ಕಾಡಾನೆ ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿದೆ. ಇದರಿಂದ ಈ ಭಾಗದಲ್ಲಿ ಜನಜೀವನ ತುಂಬಾ ದುಸ್ತರವಾಗಿದೆ. ಇಲ್ಲಿರುವ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.



