ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು.
ಪ್ರಕರಣದ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹಿರೇಹಡಗಲಿ ತಾಲೂಕಿನ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಇಂದು (ಸೆ. 19) ರಾತ್ರಿ ಬೆಂಗಳೂರಿಗೆ ಕರೆತರಲಿದ್ದಾರೆ.
ಕಳೆದ ಆರು ದಿನಗಳಿಂದ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಹಾಲಶ್ರೀ ಕಾವಿ ಕಳಚಿ ಟೀ ಶರ್ಟ್ ಧರಿಸಿ ಸಾಮಾನ್ಯ ಪ್ರಯಾಣಿಕನಂತೆ ರೈಲಿನಲ್ಲಿ ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದೆ.



