ಚಿಕ್ಕಮಗಳೂರು ಜಿಲ್ಲೆಯ 5 ಶಾಸಕರು ಜಿಲ್ಲೆಗೆ ಹಾಲಿನ ಡೈರಿ ತರುವ ಬಗ್ಗೆ ಚರ್ಚೆ ನಡೆಸಿದ್ದು ಜಿಲ್ಲೆಗೆ ಹಾಲಿನ ಡೈರಿ ತರಲು ಪಯತ್ನ ನಡೆಸಲಾಗುವುದು ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಮೂಡಿಗೆರೆ ವತಿಯಿಂದ ಇಲಾಖೆಯ ಕಚೇರಿ ಆವರಣದಲ್ಲಿ ನಡೆದ ಪಶುಸಂಜೀವಿನಿ ಅಂಬುಲೆನ್ಸ್ ಗೆ ಚಾಲನೆ, ಫಲಾನುಭವಿಗಳಿಗೆ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಲೆನಾಡಿನಲ್ಲಿ ಹೈನುಗಾರಿಕೆಗೆ ವಿಫುಲ ಅವಕಾಶಗಳಿದ್ದು ಹಾಲಿನ ಡೈರಿ ಆದರೆ ಹೈನುಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಪಶು ಸಂಜೀವಿನಿ ಅಂಬುಲೆನ್ಸ್ ಸೇವೆ ಆರಂಭವಾಗಿರುವುದು ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಿಗೂ ಹೋಗಿ ಪಶುಗಳಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಮಾತನಾಡಿ, ಗೋವು ಮಾತೆಯ ಸಮಾನವಾಗಿದ್ದು ಪಶುಗಳಿಗೂ ಕೂಡ ಅಂಬುಲೆನ್ಸ್ ಸೇವೆ ಆರಂಭಿಸಿರುವುದು ಶ್ಲಾಘನೀಯ. ಸವಲತ್ತುಗಳನ್ನು ಪಡೆದ ಫಲಾನುಭವಿಗಳು ಸವಲತ್ತುಗಳನ್ನು ಆಯಾ ಉದ್ದೇಶಗಳಿಗೆ ಸಮರ್ಪಕವಾಗಿ ಉಪಯೋಗಿಸಿಕೊಂಡಾಗ ಈ ಯೋಜನೆಗಳು ಉದ್ದೇಶ ಸಾರ್ಥಕವಾಗುತ್ತವೆ ಎಂದರು.

ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ಸಿ ರಮೇಶ್ ಮಾತನಾಡಿ, ಯೋಜನೆಯಗಳ ಸವಲತ್ತು ಅರ್ಹರಿಗೆ ತಲುಪಬೇಕು ಎಂಬ ಉದ್ದೇಶದಿಂದ ನಿಜವಾದ ಫಲಾನುಭವಿಗಳೇ ಎಂಬುದನ್ನು ಖಚಿತ ಪಡಿಸಿಕೊಂಡು ಮೇವು ಕತ್ತರಿಸುವ ಯಂತ್ರ, ರಬ್ಬರ್ ನೆಲಹಾಸಿನ ಸವಲತ್ತುಗಳಿಗೆ ಆಯ್ಕೆ ಮಾಡಲಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರು ನಿರಂತರವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಂಪರ್ಕದಲ್ಲಿದ್ದುಕೊಂಡು ಮಾಹಿತಿಯನ್ನು ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ಡಾ.ಮನು, ಪಶು ವೈದ್ಯಾಧಿಕಾರಿ ಡಾ.ಅಶೋಕ್, ಡಾ.ಹಿತೇಶ್, ಜಾನುವಾರು ಅಧಿಕಾರಿಗಳಾದ ನವೀನ್, ನಾಗೇಂದ್ರ, ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.



