1200 ವರ್ಷ ಇತಿಹಾಸವಿರುವ 25 ಲಕ್ಷ ಮಂದಿ ಮಾತನಾಡುವ ಬ್ಯಾರಿ ಭಾಷೆಯನ್ನು ಸರ್ಕಾರ ರಾಜ್ಯದ 2ನೇ ಅಧಿಕೃತ ಭಾಷೆ ಎಂದು ಪರಿಗಣಿಸಿ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಕರ್ನಾಟಕ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್ ಒತ್ತಾಯಿಸಿದರು.
ಅವರು ಮಂಗಳವಾರ ರಾಯಲ್ ಶಾಲಿಮಾರ್ ಹಾಲ್ ನಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆ, ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲೆಯ 5 ಮಂದಿ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ, ಮಲಯಾಳ, ತೆಲುಗು, ತಮಿಳು, ಹಿಂದಿ, ಅರಬ್ ಭಾಷೆಯನ್ನೊಳಗೊಂಡ ಬ್ಯಾರಿ ಭಾಷೆಗೆ 17ನೇ ಶತಮಾನದಲ್ಲಿ ಲಿಪಿಯನ್ನು ಕಂಡು ಹಿಡಿಯಲಾಗಿತ್ತು. ಅದು ಚಾಲ್ತಿಗೆ ಬಾರದಿರುವ ಕಾರಣ ಕಳೆದ 3 ವರ್ಷದ ಹಿಂದೆ ಮತ್ತೆ ಬ್ಯಾರಿ ಲಿಪಿ ಹೊರತರಲಾಗಿದೆ. ಈ ಲಿಪಿಯನ್ನು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪರಿಚಯಿಸುವ ತರಬೇತಿ ನೀಡಬೇಕು ನಂತರ ಬ್ಯಾರಿ ಸಮುದಾಯದವರು ಹೆಚ್ಚಾಗಿರುವ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಬ್ಯಾರಿ ಲಿಪಿಯ ಪಠ್ಯ ಜಾರಿಗೊಳಿಸಬೇಕು. ಆಗ ಮಕ್ಕಳು ಬ್ಯಾರಿ ಲಿಪಿ ಕಲಿಕೆಗೆ ಸುಲಭವಾಗುತ್ತದೆ. ಅಲ್ಲದೆ ಬ್ಯಾರಿ ಭಾಷೆಗೆ ಸರ್ಕಾರ ಮನ್ನಣೆ ನೀಡಿದಂತಾಗುತ್ತದೆ. ಬ್ಯಾರಿ ಬಾಷೆ ನಶಿಸಿ ಹೋಗದಂತೆ ತಡೆಯಲು ಹಾಗೂ ಸಾಹಿತ್ಯಾತ್ಮಕವಾಗಿ ಭಾಷೆಯ ಬೆಳವಣಿಗೆ ಹೆಚ್ಚಿಸಲು ಸಮುದಾಯದ ಮುಖಂಡರು 1997ರಿಂದ ನಿರಂತರವಾಗಿ ಹೋರಾಟ ನಡೆಸಿದ ಫಲವಾಗಿ 2007ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಬ್ಯಾರಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಮಹದೇವ ಪ್ರಸಾದ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ವೇದಿಕೆಯಿಂದಲೆ ಮಾತನಾಡಿ ಬ್ಯಾರಿ ಅಕಾಡೆಮಿಯನ್ನು ಘೋಷಿಸಿದ್ದರು. ಇದರಿಂದ ರಾಜ್ಯ ಸರ್ಕಾರ ಬ್ಯಾರಿ ಭಾಷೆಯನ್ನು ಒಪ್ಪಿಕೊಂಡು ಅಕಾಡೆಮಿಯನ್ನು ಸ್ಥಾಪಿಸಿದಂತಾಗಿದೆ. ಕಳೆದ 2 ವರ್ಷದ ಹಿಂದೆ ಅಕಾಡೆಮಿಯ ಅಧ್ಯಕ್ಷರನ್ನು ವಜಾಗೊಳಿಸಿದ್ದ ಸರ್ಕಾರ ಮತ್ತೆ ಅಧ್ಯಕ್ಷ, ಸದಸ್ಯರನ್ನು ನೇಮಿಸದೆ ಅಕಾಡೆಮಿಯನ್ನು ರದ್ದುಗೊಳಿಸುವ ಉನ್ನಾರ ನಡೆಸಿದೆ. ಅಕಾಡೆಮಿಗೆ ಎಳ್ಳುನೀರು ಬಿಡಲು ಸರ್ಕಾರ ಮುಂದಾದರೆ ಬ್ಯಾರಿ ಸಮುದಾಯ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾರಿ ಸಮುದಾಯ ಸಾಗರವಿದ್ದಂತೆ. ಮಂಗಳೂರನ್ನು ಕೇಂದ್ರ ಸ್ಥಾನವಾಗಿರಿಸಿಕೊಂಡಿರುವ ಈ ಸಮುದಾಯದವರು ರಾಜ್ಯದ ವಿವಿಧ ಜಿಲ್ಲೆಗಳ ಸಹಿತ ದೇಶ ವಿದೇಶದಲ್ಲಿ ಕೂಡ ನೆಲೆಸಿದ್ದಾರೆ. ಬ್ಯಾರಿಗಳೆಂದರೆ ತುಳು ಭಾಷೆಯಲ್ಲಿ ವ್ಯಾಪಾರಿಗಳೆಂದು ಅರ್ಥ, ಶತಮಾನದಿಂದಲೂ ವ್ಯಾಪಾರ ಮಾಡಿಕೊಂಡೆ ಮುಂದುವರೆದ ಸಮುದಾಯ. ಕೃಷಿ, ರಾಜಕೀಯ, ವ್ಯಾಪಾರ, ಮೀನುಗಾರಿಕೆ, ಹೈನುಗಾರಿಕೆ ಸೇರಿದಂತೆ ಕೈಗಾರಿಕೋದ್ಯಮದಲ್ಲಿ ಕೂಡ ಮುಂಚೋಣಿಯಲ್ಲಿದ್ದಾರೆ. ಕೃಷಿ, ವ್ಯಾಪಾರ ಮತ್ತು ವಿದೇಶದಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದವರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಿದೇಶಿ ವಿನಿಮಯ ಅತಿ ಹೆಚ್ಚು ಹರಿದು ಬರಲು ಕಾರಣವಾಗಿದೆ. ಹಿಂದಿನಂದಲೂ ದೇಶಕ್ಕೆ ಕೊಡುಗೆ ನೀಡಿದ ಸಮುದಾಯದ ಭಾಷೆಯನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ತಿಳಿಸಿದರು.

ಶಾಸಕಿ ನಯನ ಮೋಟಮ್ಮ ಮಾತನಾಡಿ ; ಬ್ಯಾರಿ ಸಮುದಾಯದವರು ತಮ್ಮ ಮಾತೃಭಾಷೆ ಅಥವಾ ಸಾಹಿತ್ಯ ಹಾಗೂ ಆತ್ಮವಿಶ್ವಾಸಕ್ಕೆ ಧಕ್ಕೆ ಬಂದಾಗ ಹೋರಾಟ ಮಾಡುವ ಗುಣವನ್ನು ಹೊಂದಿರುವುದರಿಂದ ಈ ಸಮುದಾಯ ಬಲಾಢ್ಯರಾಗಿ ಬೆಳೆಯಲು ಸಾಧ್ಯವಾಗಿದೆ. ಜಾರಿ ಬಾಷೆಗೆ ಪ್ರಾಚೀನ ಕಾಲದ ಪರಂಪರೆ ಇದೆ ಈ ಭಾಷೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾಷಾ ದಿನಾಚರಣೆಯಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆದಾಗ ಸಾಧ್ಯವಾಗುತ್ತದೆ, ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರವು ಪ್ರಮುಖವಾಗಿದೆ. ಹಾಗಾಗಿ ಮಹಿಳೆಯರನ್ನು ಕೇವಲ ಮನೆಗೆ ಸೀಮಿತಗೊಳಿಸದೇ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನ ಮೋಟಮ್ಮ, ಟಿ.ಡಿ.ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಮಹಮ್ಮದ್ ಅಲಿ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 160 ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು. ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ.ನಾಸೀರ್ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಸಿ.ಕೆ.ಇಬ್ರಾಹಿಂ, ಅಕ್ರಂ ಹಾಜಿ, ಇಬ್ರಾಹಿಂ ಶಾಲಿಮಾರ್, ಬಿ.ಎಚ್.ಮಹಮ್ಮದ್, ಅಬ್ಬುಬಕ್ಕರ್ ಸಿದ್ದೀಕ್, ಬಿ.ಎಚ್.ನೂರ್ ಮುಹಮ್ಮದ್, ಅಲ್ತಾಫ್ ರೆಹಮಾನ್, ವಾಹಿದ್, ಸಿ.ಎಚ್.ಅಹಮದ್ ಬಾವ, ಅಬ್ಬಾಸ್ ಬಕ್ರಳ್ಳಿ, ಕೊಪ್ಪ ಮಹಮ್ಮದ್, ಇಬ್ರಾಹಿಂ ಶಾಫಿ, ಎಚ್.ಯು. ಪಾರೂಕ್, ಎ.ಯು.ಇಬ್ರಾಹಿಂ. ರಫೀಕ್, ಎಸ್.ವೈ. ಫಾರೂಕ್ ಸಂಸೆ, ಮಹಮ್ಮದ್ ಹನೀ TT nbnnಫ್ ಹೈದ್ರೋಸ್, ಹಂಡುಗುಳಿ ರಜಾಕ್,ಅಬ್ದುಲ್ ಶಾಹುಲ್ ಅನ್ಸಾರ್ ಇತರರಿದ್ದರು.



