ಕಳೆದ ಒಂದೂವರೆ ತಿಂಗಳಿನಿಂದ ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ ‘ಐಸಿಸಿ ವಿಶ್ವಕಪ್’ ಕ್ರಿಕೆಟ್ ಟೂರ್ನಿ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ಭಾನುವಾರ ವಿಶ್ವದ ಅತಿದೊಡ್ಡ ಕ್ರಿಡಾಂಗಣವಾದ ಗುಜರಾತ್ ರಾಜ್ಯದ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ.
ಪಂದ್ಯಾವಳಿ ಉದ್ದಕ್ಕೂ ಅತ್ಯುತ್ತಮ ಪ್ರದರ್ಶನದ ಮೂಲಕ ಆಡಿರುವ ಎಲ್ಲಾ 10 ಪಂದ್ಯಗಳ ಗೆಲುವಿನೊಂದಿಗೆ ಫೈನಲ್ ತಲುಪಿರುವ ಭಾರತ, ಫೈನಲ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಟ್ರೋಫಿ ಎತ್ತಿಹಿಡಿಯುವುದರೊಂದಿಗೆ ಕೋಟ್ಯಾಂತರ ಭಾರತೀಯರ ಹಾರೈಕೆಯನ್ನು ನಿಜವಾಗಿಸುವತ್ತ ಚಿತ್ತ ನೆಟ್ಟಿದೆ.
ಇದುವರೆಗಿನ 12 ವಿಶ್ವಕಪ್ ಗಳಲ್ಲಿ ಆಸ್ಟ್ರೇಲಿಯ 5 ಬಾರಿ(1987, 1999, 2003, 2007,2015) ಚಾಂಪಿಯನ್ ಆಗಿದ್ದು, ಭಾರತ 2 ಬಾರಿ (1983, 2011) ಚಾಂಪಿಯನ್ ಆಗಿ ತಮ್ಮ ಛಾಪು ಮೂಡಿಸಿವೆ. ಉಳಿದಂತೆ ವೆಸ್ಟ್ ಇಂಡೀಸ್ 2 ಬಾರಿ (1975, 1979), ಪಾಕಿಸ್ತಾನ(1992), ಶ್ರೀಲಂಕಾ (1996), ಇಂಗ್ಲೆಂಡ್ (2019) ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಗಳಿಸಿವೆ.
ವಿಶ್ವಕಪ್ ವೇದಿಕೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇತ್ತೀಚಿನ ವರ್ಷಗಳಲ್ಲಿ ಎರಡು ಬಲಿಷ್ಠ ತಂಡಗಳಾಗಿ ಹೊರಹೊಮ್ಮಿವೆ. ಈ ಎರಡು ತಂಡಗಳು ಏಕದಿನ ವಿಶ್ವಕಪ್ ನಲ್ಲಿ ಇದುವರೆಗೆ 13 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆಸ್ಟ್ರೇಲಿಯಾ 8 ಮತ್ತು ಭಾರತ ತಂಡ 5 ಪಂದ್ಯಗಳನ್ನು ಗೆದ್ದಿವೆ. ವಿಶ್ವಕಪ್ ನಲ್ಲಿ ಒಟ್ಟಾರೆ ಪ್ರದರ್ಶನದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದುವರೆವಿಗೂ ಒಟ್ಟು 150 ಏಕದಿನ ಪಂದ್ಯಗಳಲ್ಲಿ ಮುಖಾಮುಖಯಾಗಿವೆ. ಇದರಲ್ಲಿ 83 ಪಂದ್ಯಗಳನ್ನು ಆಸ್ಟ್ರೇಲಿಯಾ ಮತ್ತು 57 ಪಂದ್ಯಗಳನ್ನು ಭಾರತ ಗೆದ್ದಿದೆ. 10 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಹಿಂದಿನ ಇತಿಹಾಸ ಏನೇ ಇರಲಿ ಪ್ರಸ್ತುತ ಭಾರತ ತಂಡ ಅತ್ಯಂತ ಬಲಿಷ್ಠವಾಗಿದ್ದು, ಆಸ್ಟ್ರೇಲಿಯಾವನ್ನು ಬಗ್ಗುಬಡಿಯುವ ಸಾಮರ್ಥ್ಯ ಹೊಂದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಂಘಿಕ ಪ್ರದರ್ಶನ ನೀಡುತ್ತಿದೆ.
2003 ರ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಮಯ್ಯಿ ತೀರಿಸಿಕೊಳ್ಳಲು ಭಾರತಕ್ಕೆ ಇದೊಂದು ಸದಾವಕಾಶವಾಗಿದೆ. ಈ ನಿಟ್ಟಿನಲ್ಲಿ ಭಾರತ ತಂಡ ಯಶಸ್ವಿಯಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.


