September 13, 2026
;
12 ckm mla news 1

 

 

ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಗ್ರಾಮದ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ‘ಪ್ರಜಾ ಸೇವಾ ಆಂದೋಲನ’ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಮಾತನಾಡಿ, ಜನಸಂಪರ್ಕ ಸಭೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಸರ್ಕಾರ ಪ್ರಜಾ ಸೇವಾ ಆಂದೋಲನವನ್ನು ಆರಂಭಿಸಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹೋಬಳಿ ಮಟ್ಟಕ್ಕೆ ಆಗಮಿಸಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ಜನರು ತಮ್ಮ ಸಮಸ್ಯೆಗಳಿಗಾಗಿ ತಾಲೂಕು ಅಥವಾ ಜಿಲ್ಲಾ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಸಭೆಯಲ್ಲಿ ಸ್ಥಾಪಿಸಿರುವ ಕೌಂಟರ್‍ಗಳಲ್ಲಿ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. ಪ್ರತಿಯೊಂದು ಅರ್ಜಿಗೂ ಸ್ಪಂದಿಸಿ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯದಿಂದ ವಂಚಿತರಾದವರು ಸಭೆಯಲ್ಲಿ ಅರ್ಜಿ ಸಲ್ಲಿಸಬಹುದು. ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಪಿಂಚಣಿ ಸಮಸ್ಯೆ ಪರಿಹಾರಕ್ಕೆ ಕ್ರಮ

ಬಿಪಿಎಲ್ ಕಾರ್ಡ್‍ಗೆ ಸಂಬಂಧಿಸಿದ ಆದಾಯ ಮಿತಿ ಹೆಚ್ಚಳದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ವೃದ್ಧಾಪ್ಯ ಹಾಗೂ ವಿಧವಾ ವೇತನ ಸ್ಥಗಿತಗೊಂಡಿರುವ ಕುರಿತು ಗಮನ ಸೆಳೆದ ಶಾಸಕ ತಮ್ಮಯ್ಯ ಅವರು, ಲಕ್ಯಾ ಹೋಬಳಿಯಲ್ಲೇ ಸುಮಾರು 2,400 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಈ ಸಮಸ್ಯೆ ಎದುರಾಗಿದ್ದು, ಈಗಾಗಲೇ 600 ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅವರಿಗೆ ಶೀಘ್ರದಲ್ಲೇ ಹಣ ಖಾತೆಗೆ ಜಮೆಯಾಗಲಿದೆ. ಉಳಿದ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ಪಿಂಚಣಿ ಮರು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನೀರಿನ ಸಮಸ್ಯೆ ಬಗ್ಗೆ ಆತಂಕ

ಲಕ್ಯಾ ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಕೆರೆಗಳು ತುಂಬದೆ ಕುಡಿಯುವ ನೀರು ಹಾಗೂ ಕೃಷಿ ನೀರಿನ ಸಮಸ್ಯೆ ತಲೆದೋರಿದೆ. ದಾಸರಹಳ್ಳಿ, ಲಕ್ಯಾ ಹಾಗೂ ಮದರಸನ ಕೆರೆ ಸೇರಿದಂತೆ ಹಲವು ಕೆರೆಗಳು ಸಮರ್ಪಕವಾಗಿ ತುಂಬಿಲ್ಲ. ಮಳೆ ಬಂದರೆ ಮಾತ್ರ ಈ ಕೆರೆಗಳನ್ನು ತುಂಬಿಸಲು ಸಾಧ್ಯವಾಗಲಿದ್ದು, ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ರಣಘಟ್ಟ ಹಾಗೂ ಭದ್ರಾ ಉಪ ಕಣಿವೆ ಯೋಜನೆಗಳ ಕಾಮಗಾರಿಗಳು ಮುಂದುವರಿದಿದ್ದು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.

ವಿದ್ಯುತ್ ಸಮಸ್ಯೆ ಶೀಘ್ರ ಪರಿಹಾರ

ಲಕ್ಯಾ ಹೋಬಳಿಯ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಯನ್ನೂ ಶಾಸಕರು ಪ್ರಸ್ತಾಪಿಸಿ, ರೈತರಿಗೆ ಕನಿಷ್ಠ ಆರು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಸೂಚನೆ ನೀಡಲಾಗಿದ್ದು, ಕಳೆದ ಕೆಲವು ದಿನಗಳಿಂದ ಉಂಟಾಗಿರುವ ವಿದ್ಯುತ್ ವ್ಯತ್ಯಯವನ್ನು ಶೀಘ್ರ ಸರಿಪಡಿಸಲಾಗುವುದು ಎಂದರು.

ಗಾಣದಾಳು ಉಪ ಕೇಂದ್ರ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ 10 ರಿಂದ 12 ದಿನಗಳಲ್ಲಿ ಉಪ ಕೇಂದ್ರ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಇದರಿಂದ ಲಕ್ಯಾ ಹೋಬಳಿಯ ವಿದ್ಯುತ್ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಸರ್ಕಾರವೇ ಜನರ ಬಳಿಗೆ ಬಂದು ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆ ರೂಪಿಸಿರುವುದು ಪ್ರಜಾಸೇವಾ ಆಂದೋಲನದ ವಿಶೇಷತೆ ಎಂದು ಹೇಳಿದರು.

ಲಕ್ಯಾ ಹೋಬಳಿ ಮಲೆನಾಡು ಮತ್ತು ಅರೆ ಮಲೆನಾಡಿನ ಸ್ವರೂಪ ಹೊಂದಿದ್ದು, ಈ ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಇಲ್ಲಿನ ರೈತರು ರಾಗಿ, ಹುರುಳಿಕಾಳು ಸೇರಿದಂತೆ ಒಣಭೂಮಿ ಬೆಳೆಗಳನ್ನು ಅವಲಂಬಿಸಿದ್ದು, ಮಳೆಯ ಕೊರತೆ ಅವರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಜನರು ಸಭೆಯಲ್ಲಿರುವ ಅಧಿಕಾರಿಗಳಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ತಿಳಿಸಿ, ಸಾಧ್ಯವಿರುವ ಪರಿಹಾರವನ್ನು ಪಡೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಪ್ರಜಾಸೇವಾ ಆಂದೋಲನದ ಉದ್ದೇಶ ಕೇವಲ ಅರ್ಜಿ ಸ್ವೀಕರಿಸುವುದಲ್ಲ; ಜನರ ಸ್ಥಳೀಯ ಸಮಸ್ಯೆಗಳನ್ನು ಅರಿತು ಆಡಳಿತದ ಯೋಜನೆಗಳಲ್ಲಿ ಅವುಗಳಿಗೆ ಆದ್ಯತೆ ನೀಡುವುದಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಇಲಾಖಾವಾರು ವಿಂಗಡಿಸಿ ಅಧಿಕಾರಿಗಳಿಗೆ ನೀಡಲಾಗುವುದು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಅಥವಾ ಒಂದು ವಾರದೊಳಗೆ ಪರಿಹರಿಸಲಾಗುವುದು. ಕೆಲವು ಸಮಸ್ಯೆಗಳಿಗೆ ಸಮಯ ಬೇಕಾದಲ್ಲಿ ಮಧ್ಯಂತರ ವಿಲೇವಾರಿ ನೀಡಲಾಗುವುದು. ನೀತಿ ಅಥವಾ ರಾಜ್ಯಮಟ್ಟದ ನಿರ್ಧಾರ ಅಗತ್ಯವಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.

ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನದ ಮೂಲಕ ಜನರ ಸಮಸ್ಯೆಗಳನ್ನು ಆಲಿಸಲಾಗುತ್ತಿದ್ದು, ಪ್ರತಿ ಬುಧವಾರ ಅರ್ಜಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಹೀಗಾಗಿ ಸಾರ್ವಜನಿಕರು ನೀಡುವ ಅರ್ಜಿಗಳ ಮೇಲೆ ನಿರಂತರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ್ ರೇಷ್ಮಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಕ್ಯಾ ಹೋಬಳಿಯಲ್ಲಿ ಪೆÇೀಡಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 300 ಜನರಿಗೆ ಪೆÇೀಡಿ ಮಾಡಲು ಅನುಮತಿ ನೀಡಲಾಗುತ್ತಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು.

ಆದಾಯ ಮಿತಿ ಪರಿಷ್ಕರಣೆಯಿಂದ ಸ್ಥಗಿತಗೊಂಡಿರುವ ಪಿಂಚಣಿ ಪ್ರಕರಣಗಳ ಪರಿಶೀಲನೆಯನ್ನೂ ನಡೆಸಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಮರು ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;