ತುಂಬು ಗರ್ಭಿಣಿಯೋರ್ವಳು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ನಡೆದಿದೆ.
ಸುಲ್ತಾನ್ ಪರ್ವೀನ್ ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ. ಪರ್ವೀನ್ ಸುಲ್ತಾನ್ ಅಸ್ಸಾಂ ಮೂಲದವರು. ಕೂಲಿಗಾಗಿ ಮೂಡಿಗೆರೆ ತಾಲೂಕಿನ ಬಾಳೂರು ಎಸ್ಟೇಟ್ ಗೆ ಆಗಮಿಸಿದ್ದರು. ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಪರ್ವೀನ್ ತುಂಬು ಗರ್ಭೀಣಿಯಾಗಿದ್ದು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಕೂಡಲೇ ಆಂಬುಲೆನ್ಸ್ ನಲ್ಲಿ ಆಕೆಯನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪರ್ವೀನ್ ಗೆ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿದೆ. ಮಹಿಳೆಯ ಸಂಬಂಧಿ ಜೊತೆ ಸೇರಿ ಆಂಬುಲೆನ್ಸ್ ಚಾಲಕ ಆರೀಫ್ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದು ಹೆರಿಗೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಇಂದು ಸೋಮವಾರ ಬೆಳಗಿನ ಜಾವ ಕೊಪ್ಪ ತಾಲೂಕು ನೇತ್ರಾಕೊಂಡಾ ಎಸ್ಟೇಟ್ ಇಂದ ಕೊಪ್ಪ ತಾಲೂಕು ಆಸ್ಪತ್ರೆಗೆ ಕರೆತರುವಾಗ ಹೆರಿಗೆ ನೋವಿನಿಂದ ಬಳಲುತ್ತಿದ್ದ ಪೂಲೇಮಾ ಅವರು ಮಾರ್ಗ ಮಧ್ಯೆ ಮಗುವಿಗೆ ಜನ್ಮ ನೀಡಿದ್ದಾರೆ. 108 ಆಂಬುಲೆನ್ಸ್ ನಲ್ಲಿ ಬರುತ್ತಿರುವಾಗ ಜಯಪುರ ಬಳಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
EMT ರಾಧಾಮಣಿ ಹಾಗು ಪೈಲೆಟ್ ಮಹೇಶ್ ಇವರು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಸುರಕ್ಷಿತವಾಗಿ ದಾಖಲಿಸಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 10 ದಿನದಲ್ಲಿ ಇದು ಆಂಬುಲೆನ್ಸ್ ನಲ್ಲಿ ಹೆರಿಗೆಯಾದ ಐದನೇ ಪ್ರಕರಣ. ಆರೋಗ್ಯ ಇಲಾಖೆ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರುತ್ತೆ. ಹೆರಿಗೆ ದಿನಾಂಕದ ಮೊದಲು ಆಶಾ ಕಾರ್ಯಕರ್ತರ ಮೂಲಕ ಅವರಿಗೆ ಎಚ್ಚರಿಕೆ ಕೊಡಿಸಬಹುದು. ಆದರೆ, ಮಹಿಳೆಯರು ಹೆರಿಗೆ ನೋವು ಬರುವವರೆಗೆ ಮನೆಯಲ್ಲೇ ಇದ್ದರೆ ಏನಾದ್ರು ಹೆಚ್ಚು-ಕಡಿಮೆಯಾದರೆ ಜವಾಬ್ದಾರಿ ಯಾರು. ಆರೋಗ್ಯ ಅಧಿಕಾರಿಗಳು ಗರ್ಭಿಣಿಯರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.


