ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಮರ ಕಡಿತಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಯ ತಣಿಗೇಬೈಲು, ಅಯ್ಯನಕೆರೆ, ಗುರುಪುರ ಗುಡ್ಡದ ಬೀರನಹಳ್ಳಿ ಪ್ರದೇಶದಲ್ಲಿ ಅಕ್ರಮವಾಗಿ ಬೆಲೆಬಾಳುವ ಸಾಗುವಾನಿ, ಬೀಟೆ, ತೇಗದ ಮರಗಳನ್ನು ಕಡಿತಲೆ ಮಾಡಲಾಗಿತ್ತು.
ಅಭಯಾರಣ್ಯದೊಳಗೆ ಪ್ರವೇಶ ಸಾಧ್ಯವಿರದಿದ್ದರೂ ಲಕ್ಷಾಂತರ ರೂ. ಬೆಲೆಬಾಳುವ ಮರಗಳ ಕಡತಲೆ ಹಿಂದೆ ಅರಣ್ಯಾಧಿಕಾರಿಗಳ ಕುಮಕ್ಕು ಮತ್ತು ನಿರ್ಲಕ್ಷ್ಯದ ಆರೋಪ ಕೇಳಿ ಬಂದಿತ್ತು.
ಇಲಾಖೆ ಫಾರೆಸ್ಟ್ ಗಾರ್ಡ್ ಸದ್ದಾಂ ಹುಸೇನ್, ಅರುಣ್ ಹಾಗೂ ಡಿ.ಆರ್.ಎಫ್.ಓ ಸುನೀಲ್ ಅವರನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಇನ್ನಷ್ಟು ಅಧಿಕಾರಿ ಸಿಬ್ಬಂದಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಳ್ಳ ಬೇಟೆ ನಿಗ್ರಹ ಮೂರು ಶಿಬಿರಗಳಿವೆ. ಶಿಬಿರಗಳಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಇವರ ಕಣ್ತಪ್ಪಿಸಿ ಮರಗಳನ್ನು ಕಳ್ಳತನ ಮಾಡಿದ್ದಾದರೂ ಹೇಗೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಶಿಬಿರದ ಸಿಬ್ಬಂದಿಯೂ ಇದರಲ್ಲಿ ಶಾಮೀಲಾಗಿರಬಹುದು ಎಂದು ಶಂಕಿಸಲಾಗಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ 53 ಮರಗಳು ಕಳ್ಳತನವಾಗಿರುವ ಬಗ್ಗೆ ಡಿಸಿಎಫ್ ವರದಿ ನೀಡಿದ್ದಾರೆ. ಈ ವರದಿಯನ್ನು ಆಧರಿಸಿ ಈಗಾಗಲೇ ಮೂವರನ್ನು ಅಮಾನತು ಮಾಡಲಾಗಿದೆ. ತನಿಖೆ ಮುಂದುವರಿದಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮರಗಳು ಕಳುವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಚಿಕ್ಕಮಗಳೂರು ಸಿಸಿಎಫ್ ಯು.ಪಿ.ಸಿಂಗ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಪಾತ್ರವೂ ಇರಬಹುದು. ಅಧಿಕಾರಿಗಳನ್ನು ರಕ್ಷಿಸಲು ಕೆಳಹಂತದ ನೌಕರರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ಅರಣ್ಯ ರಕ್ಷಣೆ ಮಾಡಬೇಕಾದ ಇಲಾಖೆಯ ಅಧಿಕಾರಿಗಳೇ ಅರಣ್ಯ ಭಕ್ಷಣೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.




