
ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119
ಜಗತ್ತಿನ ಸೃಷ್ಟಿಯಲ್ಲಿ ಭಿನ್ನತೆ ಎದ್ದು ಕಾಣುತ್ತದೆ. ಈ ಭಿನ್ನತೆಯಲ್ಲಿ ವಿಶಿಷ್ಟತೆಯನ್ನು ಹುಡುಕಿ ಸಂತೋಷಪಡುವುದನ್ನ ಮನುಜ ಕಂಡುಕೊಂಡಾಗ ಅದರ ಅನುಭವವನ್ನು ಸವಿಯಲು ಸಾಧ್ಯವಾಗುತ್ತದೆ. ಹೌದು ! ಈ ಭಿನ್ನತೆ ಯಾಕೆ ಬೇಕಿತ್ತು ? ಈ ಸೃಷ್ಟಿಕರ್ತನಿಗೆ ಮಾಡಲು ಬೇರೆ ಕೆಲಸವಿಲ್ಲದೆ ಈ ರೀತಿ ಮಾಡಿದನೇ…? ಎಂಬ ತರ್ಕ ವಿತರ್ಕಗಳು ಮನದಾಳದಲ್ಲಿ ಮೂಡುತ್ತಲೇ ಇರುತ್ತದೆ. ಮನುಜ ಸೃಷ್ಟಿಯನ್ನೇ ನೋಡುವುದಾದರೆ ಬೇರೆ ಬೇರೆ ಅಂಗಾಂಗಗಳು ಅವುಗಳ ಕೆಲಸವು ಸಹ ಬೇರೆ ಬೇರೆ. ವಿಚಿತ್ರವೆಂದರೆ ಒಂದರ ಕೆಲಸವನ್ನು ಇನ್ನೊಂದು ಮಾಡಲಾರದು – ಒಂದು ಕೈಯಲ್ಲಿರುವ ಬೆರಳುಗಳು ಸಹ ಒಂದೇ ಸಮನಾಗಿಲ್ಲವಲ್ಲ – ! ಏನಿದು ಸೃಷ್ಟಿಕರ್ತನ ವೈಚಿತ್ರ್ಯ. ಇಂತಹ ಹಲವಾರು ಪ್ರಶ್ನೆಗಳಿಗೂ ಸಹ ಉತ್ತರವನ್ನು ನೀಡಬಲ್ಲ ಅವನು ಎಂತಹ ಬುದ್ಧಿಶಾಲಿಯಿರಬಹುದಲ್ಲವೇ…!
ಒಂದು ವೇಳೆ ಈ ಸೃಷ್ಟಿ ಒಂದೇ ರೀತಿಯಾಗಿ ಇದ್ದಿದ್ದರೆ ಪ್ರಪಂಚ ಹೀಗಿರುತ್ತಿತ್ತೇ ? ಎಂಬುದು ದೊಡ್ಡ ಪ್ರಶ್ನೆ- ಅದಕ್ಕುತ್ತರ ಖಂಡಿತವಾಗಿ ಇಲ್ಲ ಎಂಬುದೇ ಇದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಸೃಷ್ಟಿಯ ವಿಭಿನ್ನತೆಯನ್ನು ನಾವು ಮರುಮಾತಿಲ್ಲದೆ ಒಪ್ಪಿಕೊಂಡು ಅದರಲ್ಲಿ ಏಕತೆಯನ್ನು ಕಾಣುವ ಗುಣವನ್ನು ಪಡೆದುಕೊಳ್ಳಬೇಕು ಎಂಬುದು ಆ ಭಗವಂತನ ನಿಲುವು. ಅನೇಕತೆಯಲ್ಲಿ ಏಕತೆಯನ್ನು ಕಾಣಬೇಕು ಎಂಬುದು ಸಹ ಸಮತತ್ತ್ವ ಸಮಭಾವವನ್ನು ಸಾರುವ ಸಿದ್ಧಿ ಪುರುಷರ ಮಾತುಗಳಾಗಿವೆ. ಇಂತಹ ವೈವಿಧ್ಯಮಯ ಜಗತ್ತು ಇರುವುದರಿಂದಲೇ ಮಾನವ ಬೇರೆ ಬೇರೆ ರೀತಿಯ ಸೃಷ್ಟಿಯಿಂದ ಅನುಭವವನ್ನು ಪಡೆಯಬಲ್ಲ. ಆ ಅನುಭವಗಳು ಅವನ ಮುಂದಿನ ಪಾಠವಾಗಬಲ್ಲವು. ಇಂತಹ ವಿಭಿನ್ನ ಜಗತ್ತನ್ನು ನಮ್ಮ ಡಿ.ವಿ.ಜಿ ಯವರು ಹೀಗೆನ್ನುತಾರೆ.
ಐಕ್ಯ ನಾನಾತ್ವಗಳು, ನಿಯತಿ ಸ್ವತಂತ್ರಗಳು !
ತರ್ಕ್ಯ ನಿಸ್ತರ್ಕ್ಯಗಳು ಬೆರೆತು ಚಿತ್ರದಲಿ “
ಶಕ್ಯಮುಂ ಪುರುಷತಂತ್ರಕ್ಕಶಕ್ಯಮುಮಾದ !
ಸಿಕ್ಕುಗಳ ಕಂತೆ ಜಗ – ಮಂಕುತಿಮ್ಮ !!
ಒಂದು ಮತ್ತು ಅನೇಕಗಳು (ನಾನಾತ್ವ), ನಿಯಮಗಳು ಮತ್ತು ಸ್ವತಂತ್ರಗಳು, ತರ್ಕ ಮತ್ತು ಅತರ್ಕಗಳು ಬೆರೆತು ಮಾನವನಿಗೆ ಸಾಧ್ಯವಾದದ್ದು ಮತ್ತು ಅಸಾಧ್ಯವಾದದ್ದು ಸೇರಿರುವ ಗಂಟುಗಳ ಕಂತೆಯೇ ಈ ಜಗತ್ತು.
ವಿಭಿನ್ನ ವಿಷಯಗಳು, ಅನೇಕ ನಿಯಮಗಳು ಹಾಗೂ ಯಾವುದನ್ನು ಯಾವಾಗ ಮಾಡಬೇಕೋ ಆಗ ಮಾಡಬೇಕು ಎನ್ನುವ ಸ್ವತಂತ್ರತೆ, ಈ ಸ್ವತಂತ್ರತೆಯಲ್ಲಿಯೇ ಅನೇಕ ವಿಚಾರ ವಿನಿಮಯಗಳು, ವಾದ -ವಿವಾದಗಳು. ಅದರಲ್ಲಿ ಯಾವುದನ್ನು ಮನುಷ್ಯ ಮಾಡಲು ಸಾಧ್ಯ, ಯಾವುದು ಅವನಿಂದ ಅಸಾಧ್ಯ ಎಂಬ ಚಿಂತನೆಗಳು. ಇಂತಹ ಹತ್ತು ಹಲವಾರು ಅಡತಡೆಗಳಿದ್ದರೂ ಸಹ ಎದೆಗುಂದದೆ ಮಾಡಬೇಕೆನ್ನುವ ಗುರಿ, ಅದರ ಸಾಧನೆಯಲ್ಲಿ ಬರುವ ಹಲವಾರು ಅಡ್ಡಿ-ಆತಂಕಗಳು. ಹೀಗೆ ಬಂದಲ್ಲ ಒಂದು ಜಂಜಾಟ ಈ ಬದುಕಿನದು. ಆದರೂ ಸಹ ಈ ಬದುಕು ತನ್ನದೇ ಆದ ರಹಸ್ಯ ವನ್ನು ಅಡಗಿಸಿಕೊಂಡು ಅದರ ಹುಡುಕಾಟದಲ್ಲಿ ಮನುಷ್ಯ ಬದುಕುವಂತೆ ಮಾಡುವ ಛಲಗಾರ. ಈ ಬದುಕೆಂಬ ಛಲಗಾರನ ಸವಾಲುಗಳನ್ನು ಎದುರಿಸಲೇಬೇಕಾದ ಅನಿವಾರ್ಯತೆ ಜಗತ್ತಿನ ಜೀವಿಗಳದ್ದು. ಇದರಲ್ಲಿ ಪ್ರಾಣಿ, ಪಕ್ಷಿಗಳು ಸಹ ಹೊರತಲ್ಲ, ಇಂತಹ ಅನೇಕ ಸಮಸ್ಯೆಗಳನ್ನು ಹೊತ್ತು ಅದರಲ್ಲಿಯೇ ಉತ್ತರವನ್ನೂ ಸಹ ಅಡಗಿಸಿಕೊಂಡಿಹ ಈ ಜಗತ್ತು ನೋಡುಗರಿಗೆ ಒಂದು ಸಿಕ್ಕುಗಳ ಕಂತೆ, ಈ ಸಿಕ್ಕುಗಳನ್ನು ನೋವಾಗದಂತೆ ನಾಜೂಕಾಗಿ ಬಿಡಿಸಿಕೊಂಡರೆ ಮಾತ್ರ ಜೀವನ ರಸಗವಳದ ಸಂತೆ.
ಇಂತಹ ಸಿಕ್ಕಿನ ಕಂತೆಯ ಜಗತ್ತಿನಲ್ಲಿ ಸಹ ಇಬ್ಬರು ಜಗಜಟ್ಟಿಗಳು ಒಂದೇ ಸಮನಾಗಿದ್ದಾರೆ ಎಂಬ ವಿಸ್ಮಯವೊಂದನ್ನು ನಮ್ಮ ಡಿ.ವಿ.ಜಿ ಯವರು ಬಿಚ್ಚಿಡುತ್ತಾರೆ. ಆ ಇಬ್ಬರು ಸಮಾನ ಬಲವಂತರಂತೆ ಹಾಗಾದರೆ ಅವರ ಯಾರಿರಬಹುದು.
ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ
ಯಮರಾಜನೊಬ್ಬ ಜಾಠರಾಜನೊಬ್ಬ
ಶ್ರಮವನನುದಿನಮುಮಾಗಿಸನೊಬ್ಬನೆಲ್ಲವನು !
ಶಮಿಸಿ ಮುಗಿಸುವನೊಬ್ಬ – ಮಂಕುತಿಮ್ಮ !!
ನಿಜವಾದ ಸಮವರ್ತಿಗಳು ಈ ಜಗತ್ತಿನಲ್ಲಿ ಇಬ್ಬರೇ. ಒಬ್ಬ ಯಮರಾಜ ಇನ್ನೊಬ್ಬ ಹೊಟ್ಟೆಯ ರಾಜ (ಜಾಠರಾಜ) ಒಬ್ಬನು ನಮ್ಮ ಹೊಟ್ಟೆಯ ಹಸಿವನ್ನು ತಣಿಸುವುದಕ್ಕಾಗಿ ಶ್ರಮಪಡಿಸುತ್ತಾನೆ ಇನ್ನೊಬ್ಬನು ನಮ್ಮ ಜೀವನವನ್ನು ಶಾಂತವಾಗಿಸಿ (ಶಮಿಸಿ) ಮುಗಿಸಿಬಿಡುತ್ತಾನೆ.
ಜಗತ್ತಿನಲ್ಲಿ ಎಷ್ಟೇ ಶ್ರೀಮಂತಕೆಯಿರಲಿ, ಬಡತನವಿರಲಿ ಎಲ್ಲರಿಗೂ ಹೊಟ್ಟೆ ಹಸಿವು ಅನ್ನವುದು ಮಾತ್ರ ಒಂದೇ ತರಹ. ಎಲ್ಲರೂ ಸಹ ಹಸಿದಾಗ ಅನ್ನವನ್ನು, ಆಹಾರವನ್ನು ಉಣ್ಣಲೇ ಬೇಕು. ನಾನು ಸಿರಿವಂತ ಅಂತ ಅಂದುಕೊಂಡು ಚಿನ್ನವನ್ನಾಗಲೀ, ಹಣವನ್ನಾಗಲಿ ತಿನ್ನುವುದಕ್ಕೆ ಆಗುವುದಿಲ್ಲ, ಆದ್ದರಿಂದ ಆಹಾರ ಎಂಬುದು ಪ್ರತಿ ಜೀವಿಗೂ ಹಸಿದಾಗ ಬೇಕೇ ಬೇಕು. ಈ ಆಹಾರದಲ್ಲಿ ಬೇರೆ ಬೇರೆ ರೀತಿಗಳಿರಬಹುದು. ಆದರೆ ತಿನ್ನವುದು ಮಾತ್ರ ಹಸಿದಾಗಲೇ-! ಈ ಒಂದು ಹಸಿವೆಯನ್ನು ನೀಗಿಸುವುದಕ್ಕಾಗಿ ಜೀವಿಯು ಪರಿಶ್ರಮ ಪಡುತ್ತಿರಲೇಬೇಕು. ಯಾವೊಂದು ಜೀವಿಗೂ ಸಹ ಪರಿಶ್ರಮವಿಲ್ಲದೆ ಆಹಾರ ದೊರಕಲಾರದು. ಆದ್ದರಿಂದ ಹಸಿವಿನ ಶಮನಕ್ಕೋಸ್ಕರ ಮನುಷ್ಯನೇ ಆಗಲಿ, ಪ್ರಾಣಿಯೇ ಆಗಲಿ ನಿರಂತರ ಶ್ರಮಿಸುತ್ತಲೇ ಇರಬೇಕು, ಯಾವ ಜೀವಿಯೇ ಆಗಿರಲಿ ಹೊಟ್ಟೆ ಹಸಿವನ್ನು ಮಾತ್ರ ತಡೆಯಲಾರದು ಆ ಕ್ಷಣಕ್ಕೆ ಅದರ ಉದರ ಶಮನಕ್ಕಾಗಿ ಏನಾದರೊಂದು ಪದಾರ್ಥ ಇದ್ದೇ ತೀರಬೇಕು
ಇಷ್ಟೆಲ್ಲ ಶ್ರಮಪಟ್ಟು ಹಸಿವೆ ನೀಗಿಸಿಕೊಳ್ಳುವ ಜೀವಿಯಲ್ಲಿ ಯಾವುದೇ ಬೇಧ ಭಾವವಿಲ್ಲದೆ ಸಮನಾಗಿ ತೆಗೆದುಕೊಂಡು ಹೋಗುವ ಯಮರಾಯ ಇನ್ನೊಬ್ಬ ಸಮವರ್ತಿ. ಯಾವಾಗ ಅವನ ಸಮಯ ಬರುತ್ತದೋ ಆಗ ಮೇಲು-ಕೀಳು, ಬಡವ-ಬಲ್ಲಿದ ಎಂಬ ಬೇಧವಿಲ್ಲದೆ ಎಲ್ಲರ ಬದುಕಿನ ಉಸಿರನ್ನು ಕೊನೆಗಾಣಿಸುತ್ತ ಶಾಶ್ವತ ವಾಗಿ ಮಲಗಿಸಿ ಬಿಡುತ್ತಾನೆ. ಪ್ರತಿ ಜೀವಿಯೂ ಸಹ ಸಾವಿನಲ್ಲಿ ಶಾಂತ! ಜಗತ್ತನ್ನೆ ಶಾಂತಗೊಳಿಸುವ ಶಕ್ತಿಯಿರುವ ಜವರಾಯ ತನ್ನ ಮನಸ್ಸಿಗೆ ಬಂದಂತೆ ಮಾಡಲಾರ, ಅವರವರ ಅಂತ್ಯ ಸಮೀಪಿಸುತ್ತಿದೆ ಎಂದಾಗ ಯಮರಾಜ ಅಲ್ಲಿ ಪ್ರತ್ಯಕ್ಷನಾಗಿ ಅವರನ್ನು ಎಲ್ಲಿ ಸೇರಿಸಬೇಕೋ ಅಲ್ಲಿಗೆ ಕರೆದುಕೊಂಡು ಹೋಗುವ ಒಬ್ಬ ಸಮಾನ ಮನಸ್ಕ. ಈ ಸಮಾನತೆ ಇಡೀ ಜಗತ್ತಿನ ಸೃಷ್ಟಿಯ ಯಾವುದರಲ್ಲ್ಲಿಯೂ ಸಹ ಕಾಣಸಿಗುವುದಿಲ್ಲ. ಆದ್ದರಿಂದಲೇ ಇವರಿಬ್ಬರು ಜಗಜಟ್ಟಿಗಳು. ಪ್ರಪಂಚದ ಎಲ್ಲ ಜೀವಿಗಳನ್ನು ಸಹ ಒಂದೇ ತೆರನಾಗಿ ನೋಡಬಲ್ಲರು ಎಂಬುದು ಮಾತ್ರ ಪ್ರಶ್ನಾತೀತವಾದ ವಿಷಯವಾಗಿದೆ ಎಂಬುದರಲ್ಲಿ ಯಾವ ಸಂಶಯವಿಲ್ಲ. ಈ ಸಮತತ್ತ್ವಗಳನ್ನು ನಡುವೆ ಅರಿತು ಅದರಲ್ಲಿ ಒಂದಾಗಿ ಬೆರೆತು ಸಮರಸದ ಜೀವನವನ್ನು ನಡೆಸಬೇಕಾಗಿರುವುದು ಬುದ್ಧಿಜೀವಿ ಎನಿಸಿಕೊಂಡಿರುವ ಮಾನವನ ಆದ್ಯ ಕರ್ತವ್ಯವಾಗಿದೆ.
ಜಗದ ಸಿಕ್ಕಿನ ಸಂತೆಯೊಳಗೆ ಸೊಕ್ಕಿನಿಂದ ನುಗ್ಗಿದರೆ ಸೋಲು, ಅದೇ ಸಮಯೋಚಿತ ಆಲೋಚನೆಯೊಡನೆ ಜಾಣತನ ದಿಂದ ನುಗ್ಗಿದರೆ ಎಂತಹ ಸಿಕ್ಕೇ ಇರಲಿ ನಮ್ಮ ಅಳೆತೆಯಲ್ಲಿ ಸಿಕ್ಕು ನಮ್ಮನ್ನು ಪಾರುಮಾಡಬಲ್ಲದು ಹಾಗೆಯೇ ನಮ್ಮ ಜೀವನದಲ್ಲಿ ಸಮರಸವನ್ನು ತರಬಲ್ಲದು ಎಂಬುದರಲ್ಲ ಸಂಶಯವಿಲ್ಲ.
************



