ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಗೆಳೆಯರ ಜೊತೆ ಹೊರಟಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ ಮಧುಸೂದನ್ (57)ಎಂದು ಗುರುತಿಸಲಾಗಿದೆ.
ಮೃತ ಮಧುಸೂದನ್ ತನ್ನ 12 ಜನ ಸ್ನೇಹಿತರೊಂದಿಗೆ ಟಿಟಿ ವಾಹನ ಮಾಡಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದರು. ಟಿಟಿ ವಾಹನ ಕೊಟ್ಟಿಗೆಹಾರಕ್ಕೆ ಬರುತ್ತಿದ್ದಂತೆ ವಾಹನವನ್ನು ಶೌಚಾಲಯಕ್ಕೆ ನಿಲ್ಲಿಸಿದ್ದರು. ಈ ವೇಳೆ ಶೌಚಾಲಯಕ್ಕೆ ಹೋಗಿದ್ದ ಮಧುಸೂದನ್ ಹೃದಯಾಘಾತದಿಂದ ಶೌಚಾಲಯದಲ್ಲಿ ಕುಸಿದು ಬಿದ್ದರು ಜೊತೆಗಿದ್ದ ಸ್ನೇಹಿತರು ಹಾಗೂ ಸ್ಥಳೀಯರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಸಮಾಜ ಸೇವಕ ಮೊಹಮ್ಮದ್ ಆರಿಫ್ ಕೂಡಲೇ ಆಂಬುಲೆನ್ಸ್ ತಂದು ಬಣಕಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಕರೆದೊಯ್ದರು. ಆದರೆ, ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಮಧುಸೂದನ್ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.



