ಪ್ರತ್ಯೇಕ ಪ್ರಕರಣಗಳಲ್ಲಿ ಕಾಡುಕೋಣ ದಾಳಿ ನಡೆಸಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೊರಟ್ಟಿಯಲ್ಲಿ ಬುಧವಾರ ಗ್ರಾ.ಪಂ ಸದಸ್ಯ ಪ್ರಕಾಶ್ ಅವರ ಪತ್ನಿ ಸರೋಜ ಅವರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ ನಡೆಸಿ ಕಾಲಿನ ತೊಡೆಯ ಎರಡು ಭಾಗಕ್ಕೆ ತಿವಿದಿದ್ದು ಕಾಲಿನ ಬಲಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅವರನ್ನು ಮೂಡಿಗೆರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಚರಣ್, ಮೋಸಿನ್, ಗ್ರಾಮಸ್ಥ ರಘುಪತಿ ಭೇಟಿ ನೀಡಿ ದಾಳಿಯಾದ ಸ್ಥಳ ಪರಿಶೀಲನೆ ಮಾಡಿ ಪರಿಹಾರದ ಭರವಸೆ ನೀಡಿದ್ದಾರೆ.
ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಗೂರು ಸಂಪ್ಲಿಯಲ್ಲಿ ಕಾಡುಕೋಣವೊಂದು ಟಿಂಬರ್ ಕಾರ್ಮಿಕನ ಮೇಲೆ ದಾಳಿ ಮಾಡಿ ಆದಂ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ,ಅವರ ಬಲಗಾಲು ತೋಡೆ ಸಮೀಪ ತುಂಡಗಿದ್ದು ಬಣಕಲ್ ಶ್ರೀ ಕ್ರಷ್ಣ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ವಾರ ಜಾವಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರತೀಶ್ ಅವರ ಮೇಲೆ ಕಾಡುಕೋಣ ದಾಳಿ ಮಾಡಿ ಗಂಭೀರವಾಗಿ ಗಾಯಗೊಂಡಿದ್ದು, ಬಲಭಾಗದ ಪಕ್ಕೆ ಮುರಿದಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು, ಜನರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆಯಿಂದ ಕಾಡಾನೆ ಹಾವಳಿ, ಮತ್ತೊಂದೆಡೆ ಕಾಡುಕೋಣಗಳ ಹಾವಳಿಯಿಂದ ಜನರು ಹೈರಾಣಾಗಿದ್ದಾರೆ.


