IMG-20240410-WA0181

 

 

ಮಲೆನಾಡಿನಾದ್ಯಂತ ಬುಧವಾರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ, ಚಕ್ಕಮಕ್ಕಿ, ಬಗ್ಗಸಗೋಡು, ಹಾಂದಿ, ಗುಲ್ಲನ್ ಪೇಟೆ, ಆಲ್ದೂರು, ಗೋಣಿಬೀಡು, ಹೊರಟ್ಟಿ, ಅಣಜೂರು, ಗಬ್ಗಲ್, ಕಳಸ ಸುತ್ತಮುತ್ತಲಿನ ಮುಸ್ಲಿಂ ಬ್ಯಾರಿ ಹಾಗೂ ಶಾಫಿ ಸಮುದಾಯದವರು ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು. ರಂಜಾನ್ (ಈದ್-ಉಲ್’ಫಿತ್ರ್)ಹಬ್ಬದ ಪ್ರಯುಕ್ತ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕೊಟ್ಟಿಗೆಹಾರದ ಜುಮ್ಮಾ ಮಸೀದಿಯಲ್ಲಿ ಮುಸ್ಲಿಮರು ಲೋಕ ಕಲ್ಯಾಣಕ್ಕಾಗಿ ಕುರ್ ಆನ್ ಪಠಿಸಿದರು. 30 ದಿನಗಳ ಕಾಲ ಕಠಿಣ ಉಪವಾಸ ವೃತ ಆಚರಿಸಿ, ಉಪವಾಸ ವೃತ ಸಂಪನ್ನಗೊಂಡ ನಂತರ ರಂಜಾನ್ ಹಬ್ಬ ಆಚರಿಸಲಾಗುತ್ತದೆ. ಅಲ್ಲಾಹು ಸರ್ವರಿಗೂ ಆರೋಗ್ಯ ಭಾಗ್ಯ ಹಾಗೂ ಕುಟುಂಬದಲ್ಲಿ ನೆಮ್ಮದಿಯ  ಬದುಕು ನೀಡಿದ್ದಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ಕೋರಿದರು.

ಖಬರಸ್ಥಾನಕ್ಕೆ ಹೋಗಿ ಕುಟುಂಬದ ಆತ್ಮಗಳಿಗೆ ಮುಕ್ತಿ ಸಿಗುವಂತೆ  ಪ್ರಾರ್ಥಿಸಿದರು.

ಮೂಡಿಗೆರೆ ಪಟ್ಟಣದ ಜುಮ್ಮಾ ಮಸೀದಿಯ ಗುರು ಮುಸ್ತಫಾ ಯಮಾನಿ ಅವರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಕೊಟ್ಟಿಗೆಹಾರ ಜುಮ್ಮಾ ಮಸೀದಿಯ ಗುರು ಅಬ್ದುಲ್ ಹಮೀದ್ ಪೈಝಿ ಮಾತನಾಡಿ ‘ಶುದ್ದ ಮಾನವೀಯ ಹಾಗೂ ಸಾಮಾಜಿಕ ಕಳಕಳಿಯೇ ಈ ಹಬ್ಬದ ಸಂದೇಶವಾಗಿದೆ. ರಂಜಾನ್ ಹಬ್ಬದ ಸಂಭ್ರಮದಲ್ಲಿ ಈದ್ ಪ್ರಾರ್ಥನೆಗಾಗಿ ಪ್ರವಾದಿ ಮುಹಮ್ಮದ್ ಹಾಗೂ ಅವರ ಅನುಯಾಯಿಗಳು ಮದೀನಾದ ಮಸೀದಿಯಲ್ಲಿ ಸೇರಿದ್ದರು. ಈದ್ ನಮಾಜ್ ಗೆ ಸಿದ್ಧರಾಗುತ್ತಿದ್ದ ವೇಳೆ, ಮಸೀದಿಯ ಮೂಲೆಯಲ್ಲಿ ಕುಳಿತು ಅಳುತ್ತಿದ್ದ ಬಾಲಕ ಹಝ್ರತ್ ಮುಹಮ್ಮದ್ ಅವರ ಕಣ್ಣಿಗೆ ಬಿದ್ದು, ವಿಚಾರಿಸಿದಾಗ ಅತ ಅನಾಥನೆಂದೂ, ಧರಿಸಲು ಹೊಸ ಬಟ್ಟೆ ಇರಲಿಲ್ಲವೆಂದು, ಹಬ್ಬದ ಸಂಭ್ರಮ ತನಗಿಲ್ಲವೆಂದೂ ಅಳುವ ವಿಚಾರ ತಿಳಿಯಿತು. ಮುಹಮ್ಮದ್ ಪೈಗಂಬರರು ಬಾಲಕನನ್ನು ಆಲಂಗಿಸಿ, ಹಣೆಗೆ ಮುತ್ತಿಟ್ಟು, ತಮ್ಮ ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ ಇತರ ಮಕ್ಕಳೊಂದಿಗೆ ಊಟಕ್ಕೆ ಕೂರಿಸಿದರು. ಅನಾಥನಾದ ಬಾಲಕ ಎಲ್ಲರೊಂದಿಗೆ ಸಂತೋಷದಿಂದ ಈದ್ ಆಚರಿಸಿದನು. ಇದರಿಂದ ಈ ಹಬ್ಬ ದಾನ ಧರ್ಮಗಳ ಹಬ್ಬವಾಗಿ ಆಚರಿಸಲ್ಪಡುತ್ತಿದೆ’ ಎಂದರು.

ಬಣಕಲ್ ಮೊಹಿದ್ದೀನ್ ಜುಮ್ಮಾ ಮಸೀದಿಯ ದರ್ಮಗುರು ಮೊಹಮ್ಮದ್  ಖತೀಬ್ ಮಾತನಾಡಿ ‘ಒಂದು ತಿಂಗಳ ಉಪವಾಸದ ಬಳಿಕ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಹಬ್ಬದ ಆಚರಣೆಯಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕಳಕಳಿಯೂ ಇದೆ. ಕಠಿಣ ಉಪವಾಸದ ಮೂಲಕ ದೇಹವನ್ನು ದಂಡಿಸಿ ಸ್ವಾರ್ಥ,ಸ್ವೆಚ್ಚೆ ರಹಿತವಾಗಿ ಸರಳವಾಗಿ ಬದುಕಿ ಕಡ್ಡಾಯ ದಾನ ಮಾಡುವ ಮೂಲಕ ದಮನಿತರ ಕಷ್ಟಕ್ಕೆ, ಬಡವರ ನೋವಿಗೆ ಸ್ಪಂದಿಸುವ ಸಾಮಾಜಿಕ ಸಮಾನತೆಯ ಸಂದೇಶವಿದೆ’ ಎಂದರು.

ಧರ್ಮಗುರು ಮುಹಜಿನ್ ಅಮೀರ್ ಫಾರೂಖಿ ಇದ್ದರು. ಬಣಕಲ್, ಕೊಟ್ಟಿಗೆಹಾರದಲ್ಲಿ ಈದ್ ನಮಾಜ್ ನಲ್ಲಿ ಸ್ಥಳೀಯ ಮುಸ್ಲಿಂ ಭಾಂದವರು, ಮಕ್ಕಳು  ಭಾಗವಹಿಸಿದ್ದರು. ಹನೀಪಿ ಪಂಗಡದವರು ಗುರುವಾರ ಈದ್ ಆಚರಿಸಲಿದ್ದಾರೆ.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ