ರೈತ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರದ ಮೋದಿ ಸರಕಾರ ಯಾವುದೇ ಜನಪರ ಯೋಜನೆ ರೂಪಿಸದೇ ಚುನಾವಣೆ ಪ್ರಚಾರದಲ್ಲಿ ಜಾತಿ, ಧರ್ಮಗಳ ವಿಷಯ ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ. ಇನ್ನೂ ಜನರನ್ನು ಮುರ್ಖರನ್ನಾಗಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ರಾಜ್ಯಕ್ಕೆ ಬರ ಪರಿಹಾರ ನೀಡಲು ನಿರಾಕರಿಸಿದ್ದ ಕೇಂದ್ರದ ಮೋದಿ ಸರಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಮೋದಿ ಸರಕಾರ 1 ವಾರದೊಳಗೆ ಪರಿಹಾರದ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಇದರಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಜನಸಾಮಾನ್ಯರ ಮೇಲಿರುವ ಕಾಳಜಿ ತೋರಿರುವುದು ಹಾಗೂ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಅಸಡ್ಡೆಗೆ ಸಾಕ್ಷಿಯಾಗಿದೆ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರ ಶಿವಸಾಗರ್ ತೇಜಸ್ವಿ ಹೇಳಿದರು.
ಅವರು ಬುಧವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಕೇವಲ ಲೋಕಸಭೆ ಚುನಾವಣೆ ಮಾತ್ರವಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಉಳಿವು, ಬಡವರ ವಿರುದ್ಧ ದಬ್ಬಾಳಿಕೆ, ನ್ಯಾಯ, ನೀತಿ, ಸಮಾನತೆ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಮತದಾರರು ಯೋಚಿಸಿ ಮತಚಲಾಯಿಸಬೇಕು. ಈ ಬಾರಿ ಬಿ.ಜೆ.ಪಿ.ಯನ್ನು ತಿರಸ್ಕರಿಸಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಕ್ತಾರ ಎಂ.ಎಸ್.ಅನಂತ್ ಮಾತನಾಡಿ, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಿಂದೆ ನೀಡಿದ ಭರವಸೆ ಎಷ್ಟು ಈಡೇರಿಸಲಾಗಿದೆ ಹಾಗೂ ಮುಂದೆ ಮಾಡುವ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಬೇಕಾಗುತ್ತದೆ. ಆದರೆ ಬಿಜೆಪಿಯವರು ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆ ಒಂದನ್ನೂ ಈಡೇರಿಸಿಲ್ಲ. ಜನರ ಬಳಿ ತೆರಳಿ ಮತ ಕೇಳಲು ಮುಖವಿಲ್ಲದೇ ಈಗ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಜನರಿಗೆ ಭಾವನೆಗಿಂತ ಬದುಕು ಮುಖ್ಯವೆಂಬದು ಅರ್ಥವಾಗಿದೆ. ಅಲ್ಲದೇ ರಾಜ್ಯ ಸರಕಾರ ನೀಡಿರುವ 5 ಗ್ಯಾರಂಟಿ ಹಾಗೂ ಮತ್ತೆ 5 ಗ್ಯಾರಂಟಿ ನೀಡುತ್ತಾರೆಂಬ ವಿಶ್ವಾಸ ಈಗಾಗಲೇ ಜನರಲ್ಲಿ ಮೂಡಿದೆ. 10 ವರ್ಷ ಸಂಸದೆಯಾಗಿದ್ದ ಶೋಭಾಕರಂದ್ಲಾಜೆ ಅವರು ಶೂನ್ಯ ಸಾಧನೆಯಿಂದ ಸ್ವಪಕ್ಷದವರೇ ಶೋಭಾ ಅವರಿಗೆ ಗೋಬ್ಯಾಕ್ ಅಭಿಯಾನ ನಡೆಸಿ ಓಡಿಸಿ ಹೊಸ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಇದರ ಮರ್ಮವೇನೆಂಬುದು ಅರಿಯದಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕೇವಲ 20 ತಿಂಗಳು ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ರಾಜ್ಯ ಸರಕಾರದ 5 ಭರವಸೆ ಈಡೇರಿಸಿದ್ದರಿಂದ ಜನರ ಮುಂದೆ ಮತ ಕೇಳಲು ಯಾವುದೇ ಸಂಕೋಷವಿಲ್ಲವೆಂದು ಹೇಳಿದರು.
ಹಳೆಮೂಡಿಗೆರೆ ಗ್ರಾ.ಪಂ. ಸದಸ್ಯ ಚಂದ್ರೇಶ್, ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ, ಕಸಬಾ ಹೋಬಳಿ ಅಧ್ಯಕ್ಷ ಸಿ.ಬಿ.ಶಂಕರ್, ಎಸ್ಟಿ ಘಟಕದ ಅಧ್ಯಕ್ಷ ಹರೀಶ್, ನಗರಾಧ್ಯಕ್ಷ ಸುರೇಶ್, ಪ್ರವೀಣ್ ಕೃಷ್ಣಾಪುರ ಉಪಸ್ಥಿತರಿದ್ದರು.



