ಮನುಕುಲದ ಸೇವೆಯೆ ರೋಟರಿಯ ಉದ್ದೇಶವೆಂದು ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಶಿವಮೊಗ್ಗದ ಉದ್ಯಮಿ ಎಚ್.ಎಲ್.ರವಿ ನುಡಿದರು.
ಚಿಕ್ಕಮಗಳೂರು ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಚಿಕ್ಕಮಗಳೂರು ರೋಟರಿಕ್ಲಬ್‍ನ ಪ್ರಸಕ್ತಸಾಲಿನ ಎಂ.ಎಲ್.ಸುಜಿತ್ ನೇತೃತ್ವದ ನೂತನ ತಂಡಕ್ಕೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.
ಶತಮಾನಗಳನ್ನು ಪೂರ್ಣಗೊಳಿಸಿರುವ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಸೇವೆ ಮಾಡುವಲ್ಲಿ ಮಾದರಿಯಾಗಿದೆ. ಸಮುದಾಯ ಸೇವೆಯನ್ನು ಗಮನಿಸಿದರೆ ಒಂದುರೀತಿಯ ಚಮತ್ಕಾರವನ್ನೆ ಗುರುತಿಸಬಹುದು. ಅದಕ್ಕಾಗಿಯೆ ರೋಟರಿ ಅಂತರರಾಷ್ಟ್ರೀಯ ಅಧ್ಯಕ್ಷೆ ಈ ವರ್ಷ ರೋಟರಿ ಧ್ಯೇಯವಾಕ್ಯದಲ್ಲಿ ರೋಟರಿ ಮ್ಯಾಜಿಕ್ ಪ್ರಮುಖವಾಗಿ ಘೋಷಿಸಿದ್ದಾರೆಂದು ಸ್ಮರಿಸಿದರು.
ಇಡೀ ಜಗತ್ತನ್ನೆ ವ್ಯಾಪಿಸಿದ್ದ ಪೋಲಿಯೋವನ್ನು ನಿರ್ಮೂಲನೆ ಮಾಡುವ ರೋಟರಿ ಪ್ರಯತ್ನ ನಿಜಕ್ಕೂ ಒಂದು ಚಮತ್ಕಾರವೇ ಸರಿ. ಕೇವಲ ನಾಲ್ವರಿಂದ ಆರಂಭಗೊಂಡು ಇಂದು ಜಗತ್ತನ್ನೆ ವ್ಯಾಪಿಸಿ ಹತ್ತಾರು ಸಾವಿರ ಸದಸ್ಯರು 100ಕ್ಕೂ ಹೆಚ್ಚು ದೇಶಗಳಲ್ಲಿ ಮನುಕುಲದ ಸೇವೆಯಲ್ಲಿ ತೊಡಗಿರುವುದೂ ಅಚ್ಚರಿ. ಒಂದುರೀತಿಯಲ್ಲಿ ಇದೊಂದು ಚಮಕ್ಕಾರವೇ ಸರಿ ಎಂದ ರವಿ, ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸೇವಾ ಕಾರ್ಯಕ್ಕೆ ಶಕ್ತಿ ತುಂಬಬೇಕೆಂದರು.
ಜಿಲ್ಲೆಯಾದ್ಯಂತ ರೋಟರಿ ಸದಸ್ಯರು ಸಾರ್ವಜನಿಕರಿಗೆ ಪ್ರಯೋಜನವಾಗುವ ಅನೇಕ ಯೋಜನೆಗಳನ್ನು ರೂಪಿಸಿರುವುದು ರೋಟರಿ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಸಂಧ್ಯಾಕಾಲದ ವೃದ್ಧರನ್ನು ಪರಿಪಾಲಿಸುವ ಜೀವನಸಂಧ್ಯಾ ಅತ್ಯುತ್ತಮ ಯೋಜನೆ ಹಲವು ವರ್ಷಗಳಿಂದ ನಡೆಯುತ್ತಿರುವುದು ಸ್ತುತ್ಯಾರ್ಹ ಎಂದ ಎಚ್.ಎಲ್.ರವಿ, ರೋಟರಿ ಆಂದೋಲನದಲ್ಲಿ ಸೇರ್ಪಡೆಗೊಂಡು ಕ್ರಿಯಾಶೀಲತೆಯ ಮೂಲಕ ಮೂರೇವರ್ಷಗಳಲ್ಲಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಸುಜಿತ್ ತಂಡ ಮಾದರಿಯ ಚಟುವಟಿಕೆಗಳನ್ನು ನಡೆಸುವ ಭರವಸೆಯಿದೆ ಎಂದರು.
ರೋಟರಿ ವಲಯನಾಯಕ ಜಿ.ಎಲ್.ವೆಂಕಟೇಶಮೂರ್ತಿ ಮಾತನಾಡಿ ಜಗತ್ತಿನ ಅತಿದೊಡ್ಡ ನ್ಯಾಸ ಆಗಿರುವ ರೋಟರಿ ಫೌಂಡೇಶನ್ ಸೇವಾಕಾರ್ಯಗಳಿಗೆ ಆರ್ಥಿಕ ನೆರವನ್ನು ನೀಡುತ್ತಿದೆ. ಆರೋಗ್ಯ, ಶಿಕ್ಷಣ, ಕುಡಿಯುವನೀರು, ಸ್ವಚ್ಛತೆ ಸೇರಿದಂತೆ ಮಾನವನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ ಎಂದರು.
ನಿರ್ಗಮಿತ ಅಧ್ಯಕ್ಷ ಶ್ರೀವಾತ್ಸವನಟರಾಜ್ ಮಾತನಾಡಿ ಎಲ್ಲ ಸದಸ್ಯರ ಸಹಕಾರದೊಂದಿಗೆ 27 ಉಪಯುಕ್ತ ಯೋಜನೆಗಳನ್ನು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. 20ಕ್ಕೂ ಹೆಚ್ಚು ಗ್ರಾಮೀಣ ಸರ್ಕಾರಿ ಶಾಲೆಮಕ್ಕಳಿಗೆ ನೋಟ್‍ಪುಸ್ತಕಗಳನ್ನು ನೀಡಿರುವುದು ತೃಪ್ತಿ ತಂದಿದೆ. ಮೊಟ್ಟಮೊದಲ ಬಾರಿಗೆ ರೋಟರಿ ಜಿಲ್ಲಾ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಗರದಲ್ಲಿ ನಡೆದಿದ್ದನ್ನು ಸ್ಮರಿಸಿದರು.
ನೂತನ ಅಧ್ಯಕ್ಷ ಸುಜಿತ್ ಮಾತನಾಡಿ ಕಿರಿಯ ಸದಸ್ಯನಮೇಲೆ ವಿಶ್ವಾಸವಿಟ್ಟು ಆಯ್ಕೆಮಾಡಿದ ಹಿರಿಯರಿಗೆ ಕೃತಜ್ಞತೆಸಲ್ಲಿಸಿ ವರ್ಷಪೂರ್ತಿ ಅರ್ಥಪೂರ್ಣ ಚಟುವಟಿಕೆ ನಡೆಸಲು ಸಹಕಾರ ಕೋರಿದರು.
ಸಹಾಯಕಗೌರ್ನರ್ ನಾಸಿರ್‍ಹುಸೇನ್ ಮೂವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ರೋಟರಿ ಆಂದೋಲನಕ್ಕೆ ಸೇರ್ಪಡೆಗೊಳಿಸಿದರು. ಮಾಜಿಅಧ್ಯಕ್ಷ ಕೆ.ಎಸ್.ರಮೇಶ್ ಕಳೆದಸಾಲಿನ ಯಶಸ್ವಿಅಧ್ಯಕ್ಷ ಎನ್.ಶ್ರೀವಾತ್ಸವ್ ಮತ್ತು ಕಾರ್ಯದರ್ಶಿ ಎಂ.ಎಲ್.ಸುಜಿತ್‍ರನ್ನು ಗೌರವಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶ್ವಥ್‍ಬಾಬು ಮತ್ತು ನಿತ್ಯದಾನಿ ಶಶಿಪ್ರಸಾದರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಶಾಲಾಮಕ್ಕಳಿಗೆ ನೋಟ್‍ಪುಸ್ತಕ ವಿತರಿಸಲಾಯಿತು.
ವರದಿ : ಪ್ರಭುಲಿಂಗಶಾಸ್ತ್ರಿ



