ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ಚುನಾವಣಾ ಅಧಿಕಾರಿಗಳಿಂದ ಅಧಿಕೃತವಾಗಿ ಪ್ರಮಾಣ ಪತ್ರ ಸ್ವೀಕರಿಸಿದರು.
ಇಂದು ಸೋಮವಾರ ಮುಂಜಾನೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಶೃಂಗೇರಿ ಕ್ಷೇತ್ರದ ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅವರಿಂದ ಶಾಸಕ ಸ್ಥಾನದ ಪ್ರಮಾಣ ಪತ್ರ ಸ್ವೀಕರಿಸಿದರು.
ಶನಿವಾರ ದಿನವಿಡೀ ನಡೆದಿದ್ದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ಅಂತಿಮಾಗಿ ಡಿ.ಎನ್. ಜೀವರಾಜ್ ಅವರು ರಾಜೇಗೌಡರಿಗಿಂತ ಒಟ್ಟಾರೆಯಾಗಿ 52 ಮತಗಳ ಅಂತರದಿಂದ ಬಹುಮತ ಪಡೆದಿದ್ದರು. ಆದರೆ ಅಂದು ಯಾವುದೇ ಅಧಿಕೃತ ಘೋಷಣೆ ಮಾಡಿರಲಿಲ್ಲ. ಆದರೆ ನಿನ್ನೆ ಭಾನುವಾರ ತಡರಾತ್ರಿ ಚುನಾವಣಾ ಅಧಿಕಾರಿಗಳು ಡಿ.ಎನ್. ಜೀವರಾಜ್ ಅವರಿಗೆ ಈಮೇಲ್ ಮೂಲ ಅಧಿಕೃತ ಘೋಷಣಾ ಪತ್ರವನ್ನು ನೀಡಿದ್ದರು.
ಇಂದು ಮುಂಜಾನೆ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಡಿ.ಎನ್. ಜೀವರಾಜ್ ಅವರು ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದರೊಂದಿಗೆ ಶೃಂಗೇರಿ ಕ್ಷೇತ್ರದಲ್ಲಿ ಇಂದಿನಿಂದ ಹೊಸ ರಾಜಕೀಯ ಶಕೆ ಆರಂಭವಾಗಲಿದೆ.

2023ರ ಚುನಾವಣೆಯಲ್ಲಿ ಕೇವಲ 201 ಮತಗಳಿಂದ ಮುನ್ನಡೆ ಪಡೆದು ಕಳೆದ ಮೂರು ವರ್ಷಗಳಿಂದ ಕಾಂಗ್ರೇಸ್ ನ ಟಿ.ಡಿ. ರಾಜೇಗೌಡ ಅವರು ಶೃಂಗೇರಿ ಕ್ಷೇತ್ರದ ಶಾಸಕರಾಗಿದ್ದರು. ಆದರೆ ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಅಂಚೆ ಮತಗಳ ಮರುಎಣಿಕೆಗೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬರೋಬ್ಬರಿ ಮೂರು ವರ್ಷಗಳ ನಂತರ ರಾಜ್ಯ ಹೈಕೋರ್ಟ್ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಗೆ ಆದೇಶ ಮಾಡಿತ್ತು.
ನ್ಯಾಯಾಲಯದ ಆದೇಶದಂತೆ ಮೇ 2 ರಂದು ಶನಿವಾರ ಚಿಕ್ಕಮಗಳೂರ ಐ ಡಿ ಎಸ್ ಜಿ ಕಾಲೇಜಿನಲ್ಲಿ ಅಂಚೆ ಮತರಗಳ ಮರುಎಣಿಕೆ ಕಾರ್ಯ ನಡೆದಿತ್ತು. ಬೆಳಗ್ಗೆಯಿಂದಲೂ ಹೈಡ್ರಾಮಾ ನಡೆದು ತಡರಾತ್ರಿ ಮತ ಎಣಿಕೆ ಪೂರ್ಣಗೊಂಡಿತ್ತು. ಮರು ಎಣಿಕೆಯಲ್ಲಿ ಟಿ.ಡಿ. ರಾಜೇಗೌಡರಿಗೆ ಬಿದ್ದಿದ್ದ 255 ಅಂಚೆ ಮತಗಳು ತಿರಸ್ಕೃತಗೊಂಡಿದ್ದವು ಇದರಿಂದ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಒಟ್ಟಾರೆ ಲೆಕ್ಕಾಚಾರದಲ್ಲಿ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಮುನ್ನಡೆ ಪಡೆದಿದ್ದರು.
ಇದೀಗ ಚುನಾವಣಾ ಅಧಿಕಾರಿಗಳು ಡಿ.ಎನ್. ಜೀವರಾಜ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ಸಹ ನೀಡಿದ್ದಾರೆ.
ಪ್ರಮಾಣ ಪತ್ರ ಸ್ವೀಕರಿಸುವ ವೇಳೆ ಡಿ.ಎನ್. ಜೀವರಾಜ್ ಅವರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು.



