ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್(57 ವರ್ಷ) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಶಾಮಣ್ಣ ಮೂಡಿಗೆರೆ ತಾಲ್ಲೂಕು ಬಣಕಲ್ ಕ್ಷೇತ್ರದಿಂದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಒಂದು ಅವಧಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಬುಧವಾರ ಸಂಜೆ ಸುಮಾರು 7 ಗಂಟೆಯ ಸಮಯದಲ್ಲಿ ಬಣಕಲ್ ಪಟ್ಟಣದಲ್ಲಿ ಅವರಿಗೆ ಹೃದಯಾಘಾತವಾಗಿ ಏಕಾಏಕಿ ಕುಸಿದು ಬಿದ್ದಿದ್ದರು. ಸ್ಥಳೀಯ ಖಾಸಗಿ ಕ್ಲಿನಿಕ್ ನಲ್ಲಿ ಪರೀಕ್ಷಿಸಿ ನಂತರ ಮೂಡಿಗೆರೆ ಸರ್ಕಾರಿ ಆಸ್ಪತ್ರೆ, ಅಲ್ಲಿಂದ ಚಿಕ್ಕಮಗಳೂರು ಆಸ್ಪತ್ರೆ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ನಿಮ್ಹಾನ್ಸ್ ತಲುಪಿದ ಕ್ಷಣದಲ್ಲೇ ಅವರು ಕೊನೆಯುಸಿರೆಳೆದರು ಎನ್ನಲಾಗಿದೆ.
ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗುತ್ತಿದ್ದು ಇಂದು(ಗುರುವಾರ) ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮ ಬಣಕಲ್ ಸಮೀಪದ ಸಬ್ಲಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶಾಮಣ್ಣ ಅವರು ಉನ್ನತ ವ್ಯಾಸಾಂಗ ಮಾಡಿದ್ದರು, ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚಿನ ಪ್ರಾವಿಣ್ಯತೇ ಹೊಂದಿದ್ದರು. ಜಿ.ಪಂ. ಸದಸ್ಯರಾಗಿದ್ದ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು, ಬಣಕಲ್ ಗ್ರಾ.ಪಂ. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರಸ್ತುತ ನಿರ್ದೇಶಕರಾಗಿದ್ದರು. ಅಪಾರ ಜ್ಞಾನವಂತರಾಗಿದ್ದರು, ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು. ಅಪಾರ ಸ್ನೇಹ ಬಳಗ ಹೊಂದಿದ್ದರು.
ಶಾಮಣ್ಣ ಅವರ ನಿಧಿನಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಹಕಾರ ಕ್ಷೇತ್ರದ ಮುಖಂಡರು, ಸಾರ್ವಜನಿಕರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
