ದೇಶದ ಅಗ್ರಗಣ್ಯ ಉದ್ಯಮಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರು ಅಪರೂಪದ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ದೇಶದ ಆಸ್ತಿಯಾಗಿದ್ದ ರತನ್ ಟಾಟಾ ಅವರು ತಮ್ಮ ಗಳಿಕೆಯ ಬಹುಭಾಗವನ್ನೆಲ್ಲಾ ದಾನಧರ್ಮಗಳಲ್ಲಿ ವಿನಿಯೋಗಿಸಿದ್ದಾರೆ.
ರತನ್ ಟಾಟಾ ಭಾರತದ ಉದ್ಯಮ ವಲಯವನ್ನು ವಿಶ್ವ ಮಟ್ಟಕ್ಕೆ ಎದ್ದು ನಿಲ್ಲುವಂತೆ ಮಾಡಿ, ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ ಮಹನೀಯರಾಗಿದ್ದರು.
ಅನೇಕ ಕಂಪನಿಗಳನ್ನು ಸ್ಥಾಪಿಸಿ, ಅವುಗಳನ್ನು ಅದ್ಭುತವಾಗಿ ನಿರ್ವಹಿಸಿ,ಗುಣಮಟ್ಟದ ಉತ್ಪನ್ನಗಳೊಂದಿಗೆ ಉತ್ತಮ ಸೇವೆಗಳನ್ನು ಒದಗಿಸುವ ಮೂಲಕ ಭಾರತದ ಮತ್ತು ವಿಶ್ವದ ಜನರ ಪ್ರೀತಿ ಗಳಿಸಿದ್ದರು. ಅವಿವಾಹಿತರಾಗಿದ್ದ ರತನ್ ಟಾಟಾ ಬಡವರಿಗೆ ಕೋಟ್ಯಂತರ ರೂಪಾಯಿ ದಾನ ಮಾಡುವ ಮೂಲಕ ಕಲಿಯುಗದ ಕರ್ಣ ಎನಿಸಿಕೊಂಡಿದ್ದರು.
ರತನ್ ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು. ರತನ್ ಟಾಟಾ ಅವರ ನಿಧನದೊಂದಿಗೆ ಭಾರತದ ಹಿರಿಯ ಉದ್ಯಮಿಗಳ ಕೊಂಡಿಯೊಂದು ಕಳಚಿದಂತಾಗಿದೆ.
ದೇಶದ ಹಿರಿಯ ಗೌರವಾನ್ವಿತ ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಹಿರಿಯ ಚೇತನಕ್ಕೆ ಗೌರವ ನಮನ ಸಲ್ಲಿಸಿದ್ದಾರೆ



