November 6, 2026
;
kudremukh

 

 

1,334.33 ಹೆಕ್ಟೇರ್ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್)ಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು, ಸಂಸ್ಥೆಯು 1,334.33 ಹೆಕ್ಟೇರ್ ಅರಣ್ಯ ಮತ್ತು ಕಂದಾಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕಿದ್ದು, ಅರಣ್ಯ ಇಲಾಖೆಗೆ 1,349.53 ಕೋಟಿ ರೂಪಾಯಿ ಪಾವತಿಸಬೇಕಿದೆ ಎಂದು ಹೇಳಿದರು.

ಈ ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ್ದ ಕೆಐಒಸಿಎಲ್‌ ಪರಿಸರಕ್ಕೆ ಮಾಡಿರುವ ಹಾನಿಯ ಮೊತ್ತ ಪಾವತಿಸಿಲ್ಲ. ಅಕ್ರಮವಾಗಿ ಲಕ್ಯಾ ಜಲಾಶಯದ ಎತ್ತರ ಹೆಚ್ಚಿಸಿ, ಅರಣ್ಯ ಮುಳುಗಡೆ ಮಾಡಿದ್ದಕ್ಕಾಗಿ ರೂ.119.12 ಕೋಟಿ, ಗಣಿಗಾರಿಕೆಗಾಗಿ ಹೊಸ ಭೂಮಿ ಅಗೆದಿದ್ದಕ್ಕಾಗಿ ರೂ. 19.88 ಕೋಟಿ ಸೇರಿದಂತೆ ಮಹಾ ಲೆಕ್ಕಪರಿಶೋಧಕರು ಉಲ್ಲೇಖಿಸಿರುವ ಮೊತ್ತ ಹಾಗೂ ಬಡ್ಡಿ ರೂ.1,349.52 ಕೋಟಿ ಬಾಕಿ ಇದೆ. ಕೆಐಒಸಿಎಲ್‌ ತನ್ನ ಸ್ವಂತ ಭೂಮಿ 114.30 ಹೆಕ್ಟೇರ್‌, ಸರ್ಕಾರದ ಕಂದಾಯ ಭೂಮಿ 1,220.03 ಹೆಕ್ಟೇರ್‌ ಸೇರಿ ಒಟ್ಟು 1334.33 ಹೆಕ್ಟೇರ್‌ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು.

ಕಂಪನಿ ಗಣಿ ಉತ್ಖನನ ಆರಂಭಿಸಿದ ವೇಳೆ ಶೇ 27ರಷ್ಟು ಮಣ್ಣನ್ನು ಲಕ್ಯಾ ಡ್ಯಾಂಗೆ ಸುರಿದಿತ್ತು. ಪ್ರಸ್ತುತ ಅಲ್ಲಿ 1,500 ಟನ್ ಮಣ್ಣು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಮಣ್ಣು ಹಾಕಲು ಅನಧಿಕೃತವಾಗಿ ಕಂಪನಿ ಲಕ್ಯಾ ಡ್ಯಾಂ ಎತ್ತರವನ್ನು ಹೆಚ್ಚಿಸಿದ್ದರಿಂದ 340 ಹೆಕ್ಟೇರ್‌ ಅರಣ್ಯಕ್ಕೆ ಹಾನಿಯಾಗಿದೆ. ಪರಿಷ್ಕರಿಸಿದ ಅದಿರನ್ನು ಮಂಗಳೂರು ಬಂದರಿಗೆ ಸಾಗಿಸಲು ಅನುಮತಿ ಪಡೆಯದೇ ಪೈಪ್‌ಲೈನ್‌ ಅಳವಡಿಸಲಾಗಿದೆ ಎಂದರು.

 

 

Leave a Reply

Your email address will not be published. Required fields are marked *