ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಲ್ಯಾಂಪ್ಸ್ ಸಹಕಾರ ಸಂಘದಿoದ ಮೂಡಿಗೆರೆ ಲ್ಯಾಂಪ್ಸ್ ಸಭಾಂಗಣದಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ಸದಸ್ಯರುಗಳಿಗೆ ಆದಾಯ ಉತ್ಪನ್ನ ಮತ್ತು ವ್ಯವಹಾರ ಕುರಿತು ವಿಶೇಷ ಸಹಕಾರ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ : ಹಿಂದುಳಿದ ಬುಡಕಟ್ಟು ಜನಾಂಗದವರೇ ಲ್ಯಾಂಪ್ಸ್ ಸಹಕಾರ ಸಂಘಗಳ ಸದಸ್ಯರಾಗಿದ್ದಾರೆ. ಕೌಶಲ್ಯಾಭಿವೃದ್ಧಿ ಹಾಗೂ ಸಂಘದಲ್ಲಿ ಸದಸ್ಯರ ವ್ಯವಹಾರದ ಬಗ್ಗೆ ತರಬೇತಿಯನ್ನು ಸದುಪಯೋಗಪಡಿಸಕೊಂಡು ಸಹಕಾರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು. ಸಹಕಾರ ಸಂಘಗಳ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸಿ ದೇಶದ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿ ನಿಲ್ಲುವಂತಾಗಲು ಸರ್ಕಾರಗಳು ಯೋಜನೆಗಳನ್ನು ರೂಪಿಸಿದ್ದು, ಇದು ಜನಸಾಮಾನ್ಯರಿಗೆ ತಲುಪುವ ನಿಟ್ಟಿನಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಳಿ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು : ರಾಜ್ಯದಲ್ಲಿ 23ಲ್ಯಾಂಪ್ಸ್ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನವು ದೊರೆಯುತ್ತಿರುವುದರಿಂದ ಸೌಲಭ್ಯವನ್ನು ಸದಸ್ಯರುಗಳಿಗೆ ದೊರಕಿಸಿಕೊಡುವಲ್ಲಿ ಲ್ಯಾಂಪ್ಸ್ ಸಹಕಾರ ಸಂಘಗಳು ಸಮರ್ಥಕವಾಗಿ ಆಡಳಿತ ನಿರ್ವಹಣೆ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಮೂಡಿಗೆರೆ ಲ್ಯಾಂಪ್ಸ್ ಅಧ್ಯಕ್ಷ ವಿಜೇಂದ್ರ, ಗಿರಿಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿಯೇ ಲ್ಯಾಂಪ್ಸ್ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಸದಸ್ಯರಿಗೆ ತರಬೇತಿಯನ್ನು ಏರ್ಪಡಿಸಲಾಗಿದ್ದು ಸಂಪೂರ್ಣ ಪ್ರಯೋಜನವನ್ನು ಪಡೆದುಕೊoಡು ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ಲ್ಯಾಂಪ್ಸ್ ಉಪಾಧ್ಯಕ್ಷೆ ಎಂ.ಪಿ.ರೇಖಾ, ವಲಯಾರಣ್ಯಾಧಿಕಾರಿ ಚರಣ್ ಕುಮಾರ್, ನಿವೃತ್ತ ಉಪನಿರ್ದೇಶಕ ರಿಯಾಜ್ ಅಹ್ಮದ್, ಲ್ಯಾಂಪ್ಸ್ ಸಹಾಯಕ ಯೋಜನಾಧಿಕಾರಿ ಆನಂದ್ ತಳವಾರ, ಜಿಲ್ಲಾ ಸಹಕಾರ ಯೂನಿಯನ್ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ಯಶಸ್ಸು ಮತ್ತಿತರರು ಉಪಸ್ಥಿತರಿದ್ದರು.



