ಅಕ್ಟೋಬರ್ 8ರಂದು ಕೊಡಗಿನ ಸುಂಟಿಕೊಪ್ಪ ಸಮೀಪ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ನಿಹಾರಿಕ (29), ಬೆಂಗಳೂರಿನ ಪಶು ವೈದ್ಯ ಡಾ. ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬುವವರು ಬಂಧಿತರು.
ಈ ಮೂವರು ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನ ಕಾಫಿ ತೋಟದಲ್ಲಿ ಸುಟ್ಟು ಹಾಕಿ ಕಾಲ್ಕಿತ್ತಿದ್ದರು. ಆಸ್ತಿಗಾಗಿ ನಿಹಾರಿಕ ಪ್ರಿಯಕರರ ಜತೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದಳು. ಹತ್ಯೆ ಮಾಡಿ ನಂತರ ಕೊಡಗಿನ ಸುಂಟಿಕೊಪ್ಪದ ಕಾಫಿ ತೋಟದವೊಂದರಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಪ್ರಕರಣ ಸಂಬಂಧ ಪೊಲೀಸರು ಸಿಸಿ ಕ್ಯಾಮೆರಾ ಸುಳಿವು ಆಧಾರಿಸಿ, ರೆಡ್ ಕಲರ್ ಬೆಂಜ್ ಕಾರಿನ ಹಿಂದೆ ಬಿದ್ದಿದ್ದರು. ಕಾರುಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಗಳು ಹೈದರಾಬಾದ್ ಸಮೀಪ ಹಗ್ಗದಿಂದ ಬಿಗಿದು ರಮೇಶ್‌ನ ಕೊಲೆ ಮಾಡಿದ್ದರು. ಕೊಲೆ ಮಾಡಿ ಬಳಿಕ ರಮೇಶ್‌ನ ಕಾರಿನಲ್ಲೇ ಆತನ ಅಪಾರ್ಟ್ಮೆಂಟ್‌ಗೆ ಹೋಗಿ ಹಣ, ಆಸ್ತಿ ದಾಖಲೆ ದೋಚಿದ್ದರು. ಆತನ ಬೆಂಜ್ ಕಾರಿನಲ್ಲೇ ಹೆಣವನ್ನು ಹಾಕಿಕೊಂಡು ನಂತರ ಬೆಂಗಳೂರಿಗೆ ಬಂದು ಪೆಟ್ರೋಲ್ ಖರೀದಿಸಿ, ಕೊಡಗಿಗೆ ತಂದು ರಮೇಶ್ ಬಾಡಿಯನ್ನು ಸುಟ್ಟು ಹಾಕಿದ್ದರು. ಕೊಲೆ ಬಳಿಕ ಅಂಕುರ್ ದೆಹಲಿ, ಹರಿಯಾಣ ಅಂತ ಸುತ್ತಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಳಿವು ನೀಡಿದ ಸಿಸಿ ಕ್ಯಾಮರ, ಬೆಂಜ್ ಕಾರ್ ಬೆನ್ನತ್ತಿದ ಕೊಡಗು ಪೊಲೀಸರು
ಬಹಳ ಕಗ್ಗಂಟಾಗಿದ್ದ ಈ ಪ್ರಕರಣವನ್ನ ಬೇಧಿಸಲು ಸ್ವತಃ ಎಸ್ಪಿ ರಾಮಜರಾಜನ್ ಇನ್ನಿಲ್ಲದಂತೆ ತಲೆ ಕಡೆಸಿಕೊಂಡಿದ್ದರು. ಈ ಪ್ರಕರಣದ ತನಿಖೆಗಾಗಿ 16 ಪೊಲಿಸರ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ನಾಲ್ಕು ದಿನಗಳ ಹಿಂದೆ ಈ ಭಾಗದಲ್ಲಿ ಓಡಾಡಿದ್ದ ವಾಹನಗಳ ವಿವರವನ್ನು ಸಿಸಿಟಿವಿಗಳಲ್ಲಿ ಪೊಲಿಸರು ಪರಿಶೀಲಿಸಿದ್ದಾರೆ. ಹೆದ್ದಾರಿಯಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಗ್ರಾಮೀಣ ರಸ್ತೆ ಬದಿಯ ತೋಟದಲ್ಲಿ ಈ ಕೃತ್ಯ ನಡೆದಿರುತ್ತದೆ. ಹಾಗಾಗಿ ಆ ರಸ್ತೆ ಮಾತ್ರವಲ್ಲದೆ, ಮಡಿಕೇರಿ, ಸುಂಟಿಕೊಪ್ಪ ಕುಶಾಲನಗರ ಮಾದಾಪುರ ವ್ಯಾಪ್ತಿಯಲ್ಲಿ ಓಡಾಡಿದ್ದ ಸಾವಿರಾರು ವಾಹನಗಳ ಮಾಹಿತಿ ಪರಿಶೀಲನೆ ಮಾಡಲಾಗುತ್ತದೆ.
ಮಡಿಕೇರಿಯಿಂದ ತುಮಕೂರು ವರೆಗೂ 500ಕ್ಕೂ ಅಧಿಕ ಸಿಸಿಟಿವಿ ದೃಷ್ಯವಾಳಿಗಳ ತನಿಖೆ ನಡೆಯುತ್ತದೆ. ಇಷ್ಟೆಲ್ಲ ತನಿಖೆಯ ಬಳಿಕ ಒಂದು ಕೆಂಪು ಬಣ್ಣದ ಬೆಂಜ್ ಕಾರಿನ ಮೇಲೆ ಇವರ ಅನುಮಾನ ಕೇಂದ್ರೀಕೃತವಾಗುತ್ತದೆ. ಈ ಕಾರು ಯಾರದ್ದು ಎಂದು ಪರಶೀಲನೆ ಮಾಡಿದಾಗ ಅದು ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ 54 ವರ್ಷದ ರಮೇಶ್ ಅವರದ್ದು ಎಂಬುದು ಅರಿವಾದಾಗುತ್ತದೆ. ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಸಾಗಿದಾಗ, ಅವರು ಒಂದು ವಾರದಿಂದ ಎಲ್ಲೂ ಕಾಣಸಿಗುತ್ತಿಲ್ಲ ಎಂಬ ಮಾಹಿತಿ ಬೆಳಕಿಗೆ ಬರುತ್ತದೆ. ಎಲ್ಲಿ ಹೋಗಿರಬಹುದು ರಮೇಶ್, ಅಂತ ತನಿಖೆ ನಡೆಸುತ್ತಲೇ ತೆಲಂಗಾಣದಲ್ಲಿ ಠಿಕಾಣಿ ಹೂಡಿದ ಕೊಡಗು ಪೊಲೀಸರು ರಮೇಶ್‌ನ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಮಾಡ್ತಾರೆ. ಈ ಸಂದರ್ಭ ರಮೇಶ್‌ನ ಎರಡನೇ ಹೆಂಡತಿ ನಿಹಾರಿಕಾಳ ಮೇಲೆ ಅನುಮಾನ ಮೂಡುತ್ತದೆ. ಹಾಗೆಯೆ ಅವಳ ಜೊತೆ ಅತಿ ಸಲುಗೆಯಿಂದ ಇದ್ದ ಬೆಂಗಳೂರಿನ ಪಶು ವೈದ್ಯ ಡಾ. ನಿಖಿಲ್ ಹಾಗೂ ಆಕೆಯ ಸ್ನೇಹಿತ ಅಂಕುರ್ ರಾಣಾನತ್ತಲೂ ತನಿಖೆಯ ಜಾಡು ಸಾಗುತ್ತದೆ. ಕೊನೆಗೆ ನಿಹಾರಿಕಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಿ ಎಲ್ಲವೂ ಬಯಲಾಗುತ್ತದೆ.
ಬೆಂಗಳೂರಿನ ರಾಮಮೂರ್ತಿ ನಗರದ ಪಶು ವೈದ್ಯ ಡಾ. ನಿಖಿಲ್ ಜೊತೆ ನಿಹಾರಿಕಾಗೆ ಅಕ್ರಮ ಸಂಬಂಧ ಇರುತ್ತದೆ. ನಿಹಾರಿಕಾ ತನ್ನ ನಾಯಿಗೆ ಚಿಕಿತ್ಸೆ ನೀಡಲೆಂದು ಪಶುವೈದ್ಯ ನಿಖಿಲ್ ಬಳಿ ತೆರಳಿದ್ದಾಗ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ. ಈ ಮಧ್ಯೆ ರಿಯಲ್ ಎಸ್ಟೇಟ್ ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ನಿಹಾರಿಕಗೂ ರಮೇಶ್ಗೂ ತೀವ್ರ ಭಿನ್ನಾಭಿಪ್ರಾಯ ಮೂಡಿ, ರಮೇಶ್ ನಿಹಾರಿಕಾಗೆ ಹಣ ನೀಡುವುದನ್ನ ನಿಲ್ಲಕಿಸಿದ್ದ. ರಮೇಶ್ನಿಂದ ಈಕೆ 8 ಕೋಟಿ ರೂ ಹಣ ನಿರೀಕ್ಷೆ ಮಾಡಿದ್ದಳಂತೆ. ಆದರೆ ಚಿಕ್ಕಾಸು ಗಿಟ್ಟುವುದಿಲ್ಲ ಎಂಬುದು ಗೊತ್ತಾದಾಗ ತನ್ನ ಸ್ನೇಹಿತ ಅಂಕುರ್ ರಾಣಾ ಜೊತೆಗೂ ರಮೇಶ್ಗೆ ಮುಹೂರ್ತ ಫಿಕ್ಸ್ ಮಾಡುತ್ತಾಳೆ. ಅಕ್ಟೋಬರ್ ಒಂದಕ್ಕೆ ಹೈದ್ರಾಬಾದ್ ಸಮೀಪದ ಉಪ್ಪಳ್ಗೆ ಬರುವಂತೆ ಪತಿ ರಮೇಶ್ಗೆ ಕರೆ ಮಾಡುತ್ತಾಳೆ. ಅದರಂತೆ ಅಲ್ಲಿಗೆ ಬಂದ ರಮೇಶ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡುತ್ತಾರೆ. ಬಳಿಕ ರಮೇಶ್ ಮನೆಗೆ ತೆರಳಿ ಅಲ್ಲಿಂದ ಆತನ ಬೆಂಜ್ ಕಾರು ಹಾಗೂ ಹಣ ತೆಗೆದುಕೊಂಡು ಡೆಡ್ ಬಾಡಿ ಜೊತೆಗೇ ಬೆಂಗಳೂರಿಗೆ ಬಂದು ಅಲ್ಲಿ ತನ್ನ ಸ್ನೇಹಿತ ಡಾ ನಿಖಿಲ್ನ ಜೊತೆಗೂಡಿ ಕೊಡಗಿಗೆ ಬರುತ್ತಾಳೆ. ಯಾರಿಗೂ ಶಂಕೆ ಬಾರದಂತೆ ಕಾಫಿ ತೋಟಕ್ಕೆ ತೆರಳಿ ಅಲ್ಲಿ ಹೆಣವನ್ನ ಬಿಸಾಕಿ ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದಾರೆ. ಹೆಣದ ಗುರುತೂ ಯಾರಿಗೂ ಸಿಗದಂತೆ ಮಾಡಲು ಇವರು ಕೊಡಗಿನ ಕಾಫಿ ತೋಟವನ್ನು ಬಳಸಿದ್ದರು. ಕೊಲೆ ನಡೆದು ನಾಲ್ಕು ದಿನಗಳ ಕಾಲ ಆ ಡೆಡ್ಬಾಡಿಯನ್ನ ಕಾರಿನಲ್ಲೇ ಇಟ್ಟುಕೊಂಡಿದ್ದರು. ಎಲ್ಲಿಯೂ ಸ್ವಲ್ಪವೂ ಶಂಕೆ ಬಾರದಂತೆ ಸಹಜವಾಗಿಯೇ ವರ್ತಿಸಿದ್ದರು.



