ಸರ್ಕಾರಿ ಭೂಮಿ ಒತ್ತುವರಿ ಮಾಡಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವಂತಹ ರೈತರಿಗೆ ಆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕಾಯ್ದೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಡಿಸೆಂಬರ್ ಕೊನೆಯ ವರೆಗೆ ವಿಸ್ತರಿಸಲಾಗಿದೆ.
ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ. ಈ ಹಿಂದೆ ಒತ್ತುವರಿ ಗುತ್ತಿಗೆ ಪ್ರಕರಣದಲ್ಲಿ ಅರ್ಜಿ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಈ ಕಾಲಾವಕಾಶ ನವೆಂಬರ್ 5ಕ್ಕೆ ಕೊನೆಯಾಗುತ್ತಿತ್ತು. ಉಳಿದಂತೆ ಹಾಸನ ಮತ್ತು ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಇದುವರೆಗೂ ಅರ್ಜಿ ಸಲ್ಲಿಸಲು ಅಧಿಕೃತ ಆದೇಶ ಬಂದಿರಲಿಲ್ಲ. ಇದೀಗ ಈ ಎರಡು ಜಿಲ್ಲೆಗಳ ಒತ್ತುವರಿದಾರರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
2005 ಜನವರಿ 1 ರಿಂದ ಪೂರ್ವದಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಸಾಗುವಳಿ ಮಾಡಿರುವ ಒತ್ತುವರಿದಾರರಿಗೆ ಒಂದು ಕುಟುಂಬಕ್ಕೆ ಗರಿಷ್ಠ 25 ಎಕರೆ ಜಮೀನನ್ನು ನಿಗದಿತ ಶುಲ್ಕ ಪಾವತಿಸಿಕೊಂಡು 30 ವರ್ಷಗಳ ವರೆಗೆ ಗುತ್ತಿಗೆ ನೀಡುವ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ.
ಒತ್ತುವರಿ ಮಾಡಿರುವ ರೈತರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ ಆಯಾ ತಾಲ್ಲೂಕುಗಳ ತಹಸೀಲ್ದಾರ್ ರವರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒತ್ತುವರಿ ಭೂಮಿ ಗುತ್ತಿಗೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆಗೆ 2024ರ ಡಿಸೆಂಬರ್ ಕೊನೆಯವರೆಗೆ ಸರ್ಕಾರ ಕಾಲಾವಕಾಶ ನೀಡಿದ್ದು, ಒತ್ತುವರಿ ಮಾಡಿರುವ ರೈತರು ಈ ಅವಧಿಯೊಳಗೆ ಅರ್ಜಿ ಸಲ್ಲಿಸಿ ಇದರ ಸದಪಯೋಗ ಪಡೆದು ಕೊಳ್ಳಬೇಕು. ಬೆಳೆಗಾರರ ಸಂಘಟನೆಗಳ ಮತ್ತು ಜನಪ್ರತಿನಿಧಿಗಳ ಮನವಿಯ ಮೇರೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಿದ ಸರ್ಕಾರ ಕ್ರಮ ಸ್ವಾಗತಾರ್ಹವಾಗಿದೆ.
ಬಿ.ಎಸ್. ಜಯರಾಂ ಬಿದರಹಳ್ಳಿ
ಮಾಜಿ ಅಧ್ಯಕ್ಷರು, ಕರ್ನಾಟಕ ಬೆಳೆಗಾರರ ಒಕ್ಕೂಟ




