ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಜನನಿಬಿಡ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, 46 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಗಳು ಇದೊಂದು ಆತ್ಮಹತ್ಯಾ ಬಾಂಬ್ ದಾಳಿಯೆಂದು ತಿಳಿಸಿವೆ. ಸ್ಫೋಟದಲ್ಲಿ 21 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಮಧ್ಯೆ ಬಲೂಚ್ ಲಿಬರೇಶನ್ ಆರ್ಮಿ (BLA) ದಾಳಿಯ ಹೊಣೆ ಹೊತ್ತುಕೊಂಡಿದೆ. ಪ್ರಾಥಮಿಕ ವರದಿ ಪ್ರಕಾರ ರೈಲು ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ. ತಕ್ಷಣವೇ ರಕ್ಷಣಾ ಮತ್ತು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದು, ಮೃತಪಟ್ಟವರು ಮತ್ತು ಗಾಯಾಳುಗಳನ್ನು ಕ್ವೆಟ್ಟಾದ ನಾಗರಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸ್ಫೋಟ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಮೇಲ್ಛಾವಣಿಯನ್ನೂ ಹಾನಿಗೊಳಿಸಿದ್ದು, ಇದರ ಶಬ್ದ ನಗರದ ವಿವಿಧ ಕಡೆಗಳಲ್ಲಿಯೂ ಕೇಳಿಸಿದೆ.



