ಇತ್ತೀಚೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿ ಯಶಸ್ವಿಯಾಗಿ ಹಿಂತಿರುಗಿದ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರ ಸಾಧನೆ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಭಾರತಕ್ಕೆ ಅದು ಒಂದು ಹೆಮ್ಮೆಯ ಕ್ಷಣವಾಗಿತ್ತು.
ಶುಭಾಂಶು ಶುಕ್ಲ ಅವರು ಬಾಹ್ಯಾಕಾಶಕ್ಕೆ ಕೊಂಡೊಯ್ದಿದ್ದ ಸ್ಮರಣಿಕೆಯೊಂದರ ವಿನ್ಯಾಸಕಾರರಲ್ಲಿ ನಮ್ಮ ಮೂಡಿಗೆರೆಯ ವರುಣ್ ಬಿ ಶೆಟ್ಟಿ ಒಬ್ಬರು ಎಂಬುದು ವಿಶೇಷವಾಗಿದೆ.
ಮೂಡಿಗೆರೆ ಬಿ.ಎನ್. ಮನಮೋಹನ್ ಶೆಟ್ಟಿಯವರ ಪುತ್ರ ವರುಣ ಶೆಟ್ಟಿ, ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ.) ಅಹಮದಾಬಾದ್‌ನ ಸ್ನಾತಕೋತ್ತರ ವಿನ್ಯಾಸಕರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ಸಹಪಾಠಿಗಳಾದ ಸಯಲಿ ಸಾವಂತ್, ಮಯಂಕ್ ವರ್ಮಾ ಮತ್ತು ಶ್ರೇಯಸ್ ವ್ಯಾಸ್ ಅವರೊಂದಿಗೆ “ಇಂಡಿಯನ್ ಸ್ಪೇಸ್ ಒಡಿಸ್ಸಿ” ಎಂಬ ಸ್ಮರಣಿಕೆ ವಿನ್ಯಾಸಗೊಳಿಸಿದ್ದರು. ಈ ಸ್ಮರಣಿಕೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಅಕ್ಸಿಯಂ 4 ಮಿಷನ್ ವೇಳೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿತ್ತು
ಈ ಸ್ಮರಣಿಕೆಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲಾಯಿತು, ಇದರಿಂದಾಗಿ ಇದು ಬಾಹ್ಯಾಕಾಶ ಹೋಗಿಬಂದ ಹೆಮ್ಮೆಯ ಸ್ಮರಣಿಕೆ ಆಗಿದೆ. ಇದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿತು. ಇದು ವರುಣ ಶೆಟ್ಟಿ ಮತ್ತು ಅವರ ತಂಡಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು.

ಮಿಷನ್‌ಗೆ ಮೊದಲು ಅವರು ಶುಭಾಂಶು ಶುಕ್ಲಾ ಅವರೊಂದಿಗೆ ಮಾತನಾಡಲು ಸಾಧ್ಯವಾಯಿತು, ಅವರು ಸ್ಮರಣಿಕೆಗಳ ಬಗ್ಗೆ ನೀಡಿದ ಅಭಿಪ್ರಾಯಗಳನ್ನು ಕೇಳಿ, ಅವುಗಳನ್ನು ಬಾಹ್ಯಾಕಾಶದಿಂದ ಮರಳಿ ತರುವ ನಂತರ ಹೇಗೆ ಬಳಸಬಹುದು ಎಂಬ ಬಗ್ಗೆ ತಮ್ಮ ಸಲಹೆಗಳನ್ನು ಹಂಚಿಕೊಂಡರು.
ಏನಿದು ಇಂಡಿಯನ್ ಸ್ಪೇಸ್ ಒಡಿಸ್ಸಿ ?
ಐಸ್ರೋ ನೀಡಿದ ನಿರ್ದೇಶನವು ಭಾರತದ ಬಾಹ್ಯಾಕಾಶ ಪ್ರಯಾಣದ ಕಥೆಯನ್ನು ಭಾರತೀಯ ಕೈಗಾರಿಕೆಗಳು ಮತ್ತು ಪರಂಪರೆಯ ಕಲೆಗಳ ಮೂಲಕ ವಿವರಿಸುವುದಾಗಿತ್ತು. ಪ್ರತಿ ತಂಡವು ಈ ಕಥೆಯನ್ನು ಪ್ರತಿನಿಧಿಸಲು ಒಂದೊಂದು ಕಲಾ ರೂಪವನ್ನು ಆರಿಸಿತು. ವರುಣ ಶೆಟ್ಟಿ ಭಾರತದ ಅತಿ ಹಳೆಯ ಕಥನ ಕಲಾ ಶೈಲಿಗಳಲ್ಲಿ ಒಂದಾದ ಚಿತ್ರಪಟವನ್ನು ಆಯ್ಕೆ ಮಾಡಿಕೊಂಡು ಐಸ್ರೋನ ಪ್ರಯಾಣವನ್ನು ಚಿತ್ರಪಟಗಳಲ್ಲಿ ದೃಶ್ಯೀಕರಿಸಿದರು.

ಈ ವಿನ್ಯಾಸದಲ್ಲಿ ಅವರು ಮೂರು ಹಂತಗಳ ಕಥೆಯನ್ನು ರೂಪಿಸಿದರು:
- ಆರಂಭಗಳು: ಉಪಗ್ರಹಗಳನ್ನು ಎತ್ತಿನ ಗಾಡಿಗಳಲ್ಲಿ ಮತ್ತು ರಾಕೆಟ್ ಭಾಗಗಳನ್ನು ಸೈಕಲ್‌ಗಳಲ್ಲಿ ಸಾಗಿಸಿದ ಐಸ್ರೋನ ಪಯಣ ಆರಂಭವನ್ನು ಚಿತ್ರಿಸುವುದು. ಇದು ಭಾರತದ ಸಾಹಸದ ಪ್ರಸಿದ್ಧ ಚಿತ್ರಗಳನ್ನು ಪ್ರತಿಬಿಂಬಿಸುತ್ತದೆ.
2. ಮುಂಚೂಣಿಗರು: ಭಾರತದ ಬಾಹ್ಯಾಕಾಶ ಪಯಣ ಬಗ್ಗೆ ಸಂಶೋಧನೆ ಮಾಡಿದ ಮಾಡಿದ ಪ್ರಮುಖ ವ್ಯಕ್ತಿಗಳನ್ನು ತೋರಿಸುವುದು. ಆರ್ಯಭಟ್ಟ, ರಾಕೇಶ್ ಶರ್ಮಾ, ಡಾ. ವಿಕ್ರಂ ಸಾರಾಭಾಯಿ ಮತ್ತು ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಪಟ್ಚಿತ್ರ ಶೈಲಿಯಲ್ಲಿ ಚಿತ್ರಿಸಲಾಗಿದೆ.
3. ಭವಿಷ್ಯ: ಭಾರತದ ಬಾಹ್ಯಾಕಾಶ ಕನಸುಗಳನ್ನು ದೃಶ್ಯೀಕರಿಸುವುದು. ಐಸ್ರೋ ಪ್ರಾರಂಭಿಸಿದ ಪ್ರಸಿದ್ಧ ಉಪಗ್ರಹಗಳು ಮತ್ತು ಗಗನಯಾನ ಯೋಜನೆಯಡಿ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕನಸುಗಳನ್ನು ಒಳಗೊಂಡಿತ್ತು
ಈ ಸ್ಮರಣಿಕೆಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಬೇಕಾಗಿದ್ದರಿಂದ ಗಾತ್ರ, ತೂಕ ಮತ್ತು ವಸ್ತುಗಳ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗಿತ್ತು. ಈ ನಿಯಮಗಳ ನಡುವೆಯೂ ವರುಣ್ ಶೆಟ್ಟಿ ಅತೀ ಚಿಕ್ಕ ಮತ್ತು ಸೂಕ್ಷ್ಮ ರೂಪಗಳಲ್ಲಿ ಪಟಚಿತ್ರ ಕೃತಿಗಳನ್ನು ಸೃಷ್ಟಿಸಿದರು, ಆದರೆ ಅವು ಕಥನದ ಶ್ರೀಮಂತಿಕೆಯನ್ನು ಉಳಿಸಿಕೊಂಡಿದ್ದವು.
ಮಿಷನ್ ನಂತರ ಶುಭಾಂಶು ಶುಕ್ಲಾ ಅವರು ಈ ಸ್ಮರಣಿಕೆಗಳನ್ನು ಹಿಂದಿರುಗಿಸಿದರು ಮತ್ತು ಅವುಗಳನ್ನು ದಾಖಲಿಸಿದ ಪುಸ್ತಕವೊಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸಮರ್ಪಿಸಿದರು. ಆ ಪುಸ್ತಕದಲ್ಲಿ ಇಂಡಿಯನ್ ಸ್ಪೇಸ್ ಒಡಿಸ್ಸಿ ಹೆಮ್ಮೆಯಿಂದ ಪ್ರಸ್ತುತಗೊಂಡಿತು. ವರುಣಶೆಟ್ಟಿ ತನ್ನ ಕೃತಿ ಅಷ್ಟೊಂದು ಮಟ್ಟದಲ್ಲಿ ಪ್ರದರ್ಶಿಸಲ್ಪಟ್ಟಿರುವುದನ್ನು ನೋಡುವುದು ಅತ್ಯಂತ ಸಂತೋಷದ ಅನುಭವವಾಗಿತ್ತು.
ಈ ಸಂಪೂರ್ಣ ಯೋಜನೆ ಐಸ್ರೋನ “ಪಹಿಚಾನ್” ಉಪಕ್ರಮದ ಭಾಗವಾಗಿತ್ತು, ಇದರಲ್ಲಿ ಸುಮಾರು 200 ವಿದ್ಯಾರ್ಥಿ ತಂಡಗಳು ಸ್ಪರ್ಧಿಸಿದ್ದವು. ಅವುಗಳಲ್ಲಿ ಕೇವಲ 13 ತಂಡಗಳನ್ನು ಆಯ್ಕೆ ಮಾಡಲಾಗಿತ್ತು ಮತ್ತು ವರುಣ ಶೆಟ್ಟಿ ತಂಡವೂ ಅದರಲ್ಲಿ ಒಂದಾಗಿತ್ತು. ಇದು ಅವರನ್ನು ಭವಿಷ್ಯದಲ್ಲೂ ಇನ್ನಷ್ಟು ವೈವಿಧ್ಯಮಯ ವಿನ್ಯಾಸಗಳನ್ನು ರಚಿಸಲು ಪ್ರೇರೇಪಿಸುತ್ತದೆ.
ಯಾರಿವರು ವರುಣ್ ಶೆಟ್ಟಿ ? : ಕರ್ನಾಟಕ ರಾಜ್ಯ ಅದರಲ್ಲೂ ಮೂಡಿಗೆರೆ ಲೋಕವಳ್ಳಿ ಮೂಲದ ವರುಣ ಶೆಟ್ಟಿ ತನ್ನ ಕುಟುಂಬ ಮತ್ತು ಸಮುದಾಯಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಲೋಕವಳ್ಳಿ ಚಿತ್ತರಂಜನ್ ಎಸ್ಟೇಟ್ ನ ಬಿ.ಎನ್. ಮನಮೋಹನ್ ಮತ್ತು ರಾಧಿಕಾ ಅವರ ಪುತ್ರ ಹಾಗೂ ದಿವಂಗತ ಶ್ರೀಮತಿ ಲೀಲಾವತಿ ಮತ್ತು ಬಿ.ಸಿ. ದಿವಂಗತ ಶ್ರೀ ನಾಗಪ್ಪ ಶೆಟ್ಟಿ ಅವರ ಮೊಮ್ಮಗ.

ಅವರ ಸ್ನಾತಕೋತ್ತರ ಪ್ರಬಂಧ ಯೋಜನೆ ಪ್ರೈಮಲ್, ಜಪಾನ್‌ನ ಮಿತ್ಸುಬಿಷಿ ಫುಸೋ (ಡೈಮ್ಲರ್ ಟ್ರಕ್ ಏಷ್ಯಾ ಅಡಿಯಲ್ಲಿ) ಪ್ರಾಯೋಜಿತವಾಗಿದ್ದು, ಇಂಡಿಯನ್ ಡಿಸೈನರ್ಸ್ ಅಸೋಸಿಯೇಷನ್ ಪ್ರಶಸ್ತಿಯನ್ನು ಗೆದ್ದಿತ್ತು ಮತ್ತು ಹಾಂಗ್ ಕಾಂಗ್ ಡಿಸೈನರ್ಸ್ ಅಸೋಸಿಯೇಷನ್ ನೀಡಿದ ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು ಅವರು ಹಾಂಗ್ ಕಾಂಗ್ ಡಿಸೈನರ್ಸ್ ಅಸೋಸಿಯೇಷನ್ ಗ್ಲೋಬಲ್ ಡಿಸೈನ್ ಅವಾರ್ಡ್ಸ್ (GDA) ವಿಜೇತರಲ್ಲೊಬ್ಬರಾಗಿ ನಮ್ಮ ಜಿಲ್ಲೆಗೆ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.



